×
Ad

ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಗಳು ಪೊಲೀಸ್ ಕಸ್ಟಡಿಗೆ: ಕಮಿಷನರ್ ಟಿ.ಆರ್.ಸುರೇಶ್

Update: 2018-01-04 21:19 IST

ಮಂಗಳೂರು, ಜ. 4: ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಎಡಿಜಿಪಿ ಕಮಲ್ ಪಂತ್ ತಿಳಿಸಿದ್ದಾರೆ.

ನಗರದ ಕಮಿಷನರ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಕ್ ರಾವ್ ಕೊಲೆ ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಬಂದು ಕೃತ್ಯ ನಡೆಸಿರುವ ಬಗ್ಗೆ ಮಾಹಿತಿಯನ್ನು ನಿಯಂತ್ರಣ ಕೊಠಡಿಯ ಮೂಲಕ ಎಲ್ಲಾ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿತ್ತು. ಪೊಲೀಸರು ಆರೋಪಿಗಳ ಹುಡುಕಾಟ ಮುಂದುವರಿಸಿರುವಂತೆಯೇ ಕಾರು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಂಜೆ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಮುಲ್ಕಿ ಠಾಣಾ ಪಿಎಸ್‌ಐ ಶೀತಲ್ ಅವರ ಎದುರಿನಿಂದ ಹಾದು ಹೋಗುತ್ತಿದ್ದಂತೆ ಶೀತಲ್ ಅವರು ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಕಾರು ನಿಲ್ಲಿಸದೆ ಶೀತಲ್ ಅವರ ಮೇಲೆ ನುಗ್ಗಿಸಲು ಪ್ರಯತ್ನಿಸಿದ್ದು, ಈ ಸಂದರ್ಭ ಅವರ ಬಲಗೈ ಮತ್ತು ಬೆರಳಿಗೆ ಗಾಯ ಉಂಟಾಗಿದೆ. ಬಳಿಕ ತನ್ನ ಆತ್ಮರಕ್ಷಣೆಗಾಗಿ ಕಾರಿನ ಕಡೆಗೆ ಐದು ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಗಳನ್ನು ಬೆನ್ನಟ್ಟಿದ್ದು, ಆರೋಪಿಗಳ ಪೈಕಿ ಕಿನ್ನಿಗೋಳಿ ಮೆನ್ನಬೆಟ್ಟುವಿನ ಮುಹಮ್ಮದ್ ನೌಷಾದ್ (22) ಹಾಗೂ ಕೃಷ್ಣಾಪುರ 4ನೆ ಬ್ಲಾಕ್‌ನ ಮುಹಮ್ಮದ್ ಇರ್ಷಾನ್ (21) ಎಂಬವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಆದರೆ, ಕಾರಿನಲ್ಲಿದ್ದ ಇತರ ಇಬ್ಬರು ಈ ಸಂದರ್ಭ ಪರಾರಿಯಾಗಿದ್ದಾರೆ ಎಂದು ಎಡಿಜಿಪಿ ವಿವರಿಸಿದರು.

ಪರಾರಿಯಾದ ಆರೋಪಿಗಳ ಪತ್ತೆ ಕಾರ್ಯವನ್ನು ಕೈಗೆತ್ತಿಕೊಂಡ ಮಂಗಳೂರು ನಗರ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಶಾಂತರಾಮ ಮತ್ತು ತಂಡ ಹಾಗೂ ಪಣಂಬೂರು ಇನ್ಸ್‌ಪೆಕ್ಟರ್ ರಫೀಕ್ ಮತ್ತು ಅವರ ತಂಡಕ್ಕೆ ತಪ್ಪಿಸಿಕೊಂಡಿದ್ದ ಇಬ್ಬರು ಆರೋಪಿಗಳು ಬಡಗ ಎಡಪದವು ದಡ್ಡಿಗುರಿ ಎಂಬಲ್ಲಿ ಇದ್ದಾರೆಂಬ ಮಾಹಿತಿ ಬಂತು. ಅದರಂತೆ ಇನ್ಸ್‌ಪೆಕ್ಟರ್‌ಗಳಾದ ಶಾಂತರಾಮ ಮತ್ತು ರಫೀಕ್ ಮತ್ತವರ ತಂಡ ಸ್ಥಳಕ್ಕೆ ತೆರಳಿದಾಗ ಪೊಲೀಸರನ್ನು ಗಮನಿಸಿದ ಆರೋಪಿಗಳಾದ ಕೃಷ್ಣಾಪುರ 7ನೆ ಬ್ಲಾಕ್‌ನ ಮುಹಮ್ಮದ್ ನವಾಝ್ ಯಾನೆ ಪಿಂಕಿ ನವಾಝ್ (23) ಮತ್ತು ಕೃಷ್ಣಾಪುರ 4ನೆ ಬ್ಲಾಕ್‌ನ ರಿಝ್ವಾನ್ ಯಾನೆ ರಿಜ್ಜು (24) ಎಂಬವರು ತಲವಾರಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಶಾಂತರಾಮ ಹಾಗೂ ರಫೀಕ್ ಅವರು ಆತ್ಮ ರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಆರೋಪಿಗಳಿಬ್ಬರಿಗೆ ಗುಂಡು ತಗಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರು ಮಾತನಾಡಿ, ಆರೋಪಿಗಳ ಪೈಕಿ ಮುಹಮ್ಮದ್ ನವಾಝ್ ಯಾನೆ ಪಿಂಕಿ ನವಾಝ್ ಎಂಬಾತ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ. ಕೊಣಾಜೆ, ವಿಟ್ಲ, ಬಂಟ್ವಾಳ ನಗರ, ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಅಡಿಕೆ ಕಳ್ಳತನ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣ, ಮಂಗಳೂರು ಜೈಲ್ ನಲ್ಲಿದ್ದ ಸಮಯ ಜೈಲ್ ಒಳಗಡೆ ಕೊಲೆ ಯತ್ನ ಪ್ರಕರಣ, ಕಾವೂರು ಪೊಲೀಸ್ ಠಾಣೆಯಲ್ಲಿ ದರೋಡೆಗೆ ಯತ್ನಿಸಿದ ಪ್ರಕರಣಗಳು ದಾಖಲಾಗಿವೆ ಎಂದರು.

ಆರೋಪಿ ರಿಝ್ವಾನ್ 2016ರಲ್ಲಿ ಭರತ್ ರಾಜ್ ಎಂಬಾತನ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದು, ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಮೇಲೆ ಒಟ್ಟು 4 ಪ್ರಕರಣಗಳಲ್ಲಿ 1 ಕೊಲೆ, 3 ಕೊಲೆಗೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.

ಆರೋಪಿ ಮುಹಮ್ಮದ್ ನೌಶಾದ್ ವಿರುದ್ಧ ಮಾನಭಂಗಕ್ಕೆ ಯತ್ನಿಸಿ ಹಲ್ಲೆ, ಒಂದು ಕೊಲೆ, ಒಂದು ಕೊಲೆಗೆ ಯತ್ನ ಸಹಿತ ಮೂರು ಪ್ರಕರಣಗಳು ದಾಖಲಾಗಿವೆ. ಆರೋಪಿ ಇರ್ಷಾನ್ ಎಂಬಾತನ ವಿರುದ್ಧ ಕೊಲೆ ಮತ್ತು ಕೊಲೆಗೆ ಯತ್ನ ಪ್ರಕರಣ ದಾಖಲಾಗಿವೆ ಎಂದು ಅವರು ವಿವರಿಸಿದರು.

ಆರೋಪಿಗಳು ಪೊಲೀಸ್ ಕಸ್ಟಡಿಗೆ

ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ. ಕೊಲೆ ಉದ್ದೇಶ ಸ್ಪಷ್ಟವಾಗಿಲ್ಲ. ಆರೋಪಿಗಳಿಗೆ ಯಾವುದೇ ಸಂಘಟನೆಯ ಬಗ್ಗೆ ಸಂಪರ್ಕ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಸ್ಪಷ್ಟವಾಗಲಿದೆ ಎಂದು ಕಮಿಷನರ್ ಟಿ.ಆರ್.ಸುರೇಶ್ ಮಾಹಿತಿ ನೀಡಿದರು.

ಪೊಲೀಸ್ ತಂಡಕ್ಕೆ 1.20 ಲಕ್ಷ ರೂ. ಬಹುಮಾನ

ಎಡಿಜಿಪಿ ಕಮಲ್‌ಪಂತ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಮುಲ್ಕಿ ಪೊಲೀಸ್ ಠಾಣಾ ಪಿಎಸ್‌ಐ ಶೀತಲ್, ಎಎಸ್‌ಐ ಚಂದ್ರಶೇಖರ್, ಸಿಬ್ಬಂದಿ ಮಹೇಶ್, ಜೀಪ್ ಚಾಲಕ ಹುಸೇನ್, ಸಿಸಿಬಿ ಇನ್ಸ್‌ಪೆಕ್ಟರ್ ಶಾಂತರಾಮ, ಪಣಂಬೂರು ಇನ್ಸ್‌ಪೆಕ್ಟರ್ ರಫೀಕ್, ಹೋಂಗಾರ್ಡ್ ಹರೀಶ್ ಅವರಿಗೆ 1.20 ಲಕ್ಷ ರೂ. ನೀಡಿ ಗೌರವಿಸಿದರು.

ಕೊಲೆ ನಡೆದು ಕೆಲವೇ ತಾಸುಗಳೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯವನ್ನು ಕಮಲ್‌ಪಂತ್ ಅವರು ಶ್ಲಾಘಿಸಿದರು.

ಇಬ್ಬರ ಮೇಲೆ ಹಲ್ಲೆ: ಕಮಿಷನರ್‌

ಬುಧವಾರ ದೀಪಕ್ ರಾವ್ ಹತ್ಯೆಯ ಬಳಿಕ ಅದೇ ದಿನ ರಾತ್ರಿ ಸುರತ್ಕಲ್ ಮತ್ತು ಕೊಟ್ಟಾರಚೌಕಿ ಬಳಿ ಇಬ್ಬರ ಮೇಲೆ ಹಲ್ಲೆ ನಡೆದಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಬಳಿ ಮುಬಶ್ಶಿರ್ ಎಂಬವರ ಮಲೆ ಆರೋಪಿಗಳು ಕಲ್ಲೆಸೆದು ಗಾಯ ಮಾಡಿದ್ದಾರೆ. ಕೊಟ್ಟಾರಚೌಕಿ ಬಳಿ ಬಶೀರ್ ಎಂಬವರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಮುಬಶ್ಶಿರ್ ಅಪಾಯದಿಂದ ಪಾರಾಗಿದ್ದರೆ, ಬಶೀರ್ ಎಂಬವರ ಸ್ಥಿತಿ ಚಿಂತಾಜನಕವಾಗಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News