ಕೇವಲ 500 ರೂ.ಗೆ ವಾಟ್ಸ್ಯಾಪ್ ನಲ್ಲಿ ಸಿಗುತ್ತೆ ಪ್ರತಿಯೊಬ್ಬರ ಆಧಾರ್ ಮಾಹಿತಿ !
ಹೊಸದಿಲ್ಲಿ, ಜ.4: ವಿವಿಧ ಸಾಮಾಜಿಕ ಸೇವಾ ಯೋಜನಾ ಕಾರ್ಯಕ್ರಮಗಳ ಸೌಲಭ್ಯಗಳನ್ನು ಪಡೆಯಲು ಎಲ್ಲಾ ಪ್ರಜೆಗಳಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರವು, ಪ್ರತಿಯೊಬ್ಬ ಪ್ರಜೆಯು ಆಧಾರ್‌ನಲ್ಲಿ ನೀಡುವ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದೆಂಬ ಭರವಸೆಯನ್ನೂ ಕೂಡಾ ನೀಡಿತ್ತು. ಆದರೆ ಕೇವಲ 500 ರೂ. ಪಾವತಿಸಿದರೆ ಸಾಕು, ಯಾವುದೇ ಪ್ರಜೆಯ ಆಧಾರ್ ಕಾರ್ಡ್‌ನ ಪ್ರತಿಯೊಂದು ವಿವರಗಳನ್ನು ಯಾರೂ ಕೂಡಾ ಸುಲಭವಾಗಿ ಪಡೆಯಲು ಸಾಧ್ಯವಿದೆಯೆಂಬ ಆತಂಕಕಾರಿ ವಿಷಯವನ್ನು ‘ ದಿ ಟ್ರಿಬ್ಯೂನ್’’ ಆಂಗ್ಲ ದಿನಪತ್ರಿಕೆಯು ನಡೆಸಿದ ರಹಸ್ಯ ಕುಟುಕು ಕಾರ್ಯಾಚರಣೆಯೊಂದು ಬಯಲಿಗೆಳೆದಿದೆ.
‘ದಿ ಟ್ರಿಬ್ಯೂನ್’ ಪತ್ರಿಕೆಯ ವರದಿಗಾರರೊಬ್ಬರು ಆಧಾರ್ ಮಾಹಿತಿಗಳನ್ನು ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ಮಾರಾಟ ಮಾಡುವ ಅಜ್ಞಾತ ಮಾರಾಟಗಾರನೊಬ್ಬನನ್ನು ಸಂಪರ್ಕಿಸಿದ್ದರು. ಇದಕ್ಕಾಗಿ ಆತನಿಗೆ ಪೇಟಿಎಂ ಮೂಲಕ 500 ರೂ.ಗಳನ್ನು ಕೂಡಾ ಪಾವತಿಸಿದ್ದರು. ಆಧಾರ್ ವಿವರಗಳನ್ನು ಪಡೆಯಲು ಈ ಏಜೆಂಟ್, ಟ್ರಿಬ್ಯೂನ್‌ನ ವರದಿಗಾರನಿಗಾಗಿ ಗೇಟ್‌ವೇ ಒಂದನ್ನು ಕೂಡಾ ಸೃಷ್ಟಿಸಿದ್ದ. ಆ ಮೂಲಕ ಆತನಿಗೆ 1 ಕೋಟಿಗೂ ಅಧಿಕ ನಾಗರಿಕರ ಆಧಾರ್ ಸಂಖ್ಯೆಗಳು ಹಾಗೂ ಅವರು ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದ (ಯುಐಎಡಿಐ) ಅವರ ಹೆಸರು, ವಿಳಾಸ, ಅಂಚೆ ಸಂಖ್ಯೆ (ಪಿನ್‌ಕೋಡ್), ಭಾವಚಿತ್ರ, ದೂರವಾಣಿ ಸಂಖ್ಯೆ ಹಾಗೂ ಇಮೇಲ್ ವಿವರಗಳು ಅನಿರ್ಬಂಧಿತವಾಗಿ ದೊರೆಯುವಂತೆ ಮಾಡಿದ್ದ.
ಅಷ್ಟೇ ಅಲ್ಲ, ಪತ್ರಿಕೆಯ ತಂಡವು ಈ ಏಜೆಂಟ್‌ಗೆ ಹೆಚ್ಚುವರಿಯಾಗಿ 300 ರೂ. ಪಾವತಿಸಿದಾಗ, ಯಾವುದೇ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ, ಆಧಾರ್ ಸಂಖ್ಯೆಯನ್ನು ಮುದ್ರಿಸಲು ಸಾಧ್ಯವಿರುವ ಸಾಫ್ಟ್‌ವೇರ್‌ನ್ನು ಕೂಡಾ ಆತ ಒದಗಿಸಿಕೊಟ್ಟಿದ್ದಾನೆ.
ವಿವಿಧ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಅನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ, ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿದ ಸಮಯದಲ್ಲೇ, ದಿ ಟ್ರಿಬ್ಯೂನ್ ಪತ್ರಿಕೆಯು, ಆಧಾರ್ ಮಾಹಿತಿ ಸೋರಿಕೆ ಜಾಲವನ್ನು ಬಯಲಿಗೆಳೆದಿದೆ.
'ದಿ ಟ್ರಿಬ್ಯೂನ್' ಪತ್ರಿಕೆಯ ಪ್ರಕಾರ, ಈ ಜಾಲವು ಸುಮಾರು ಆರು ತಿಂಗಳ ಹಿಂದೆಯೇ ಕಾರ್ಯಾರಂಭಿಸಿತ್ತು. ಅಜ್ಞಾತ ಹೆಸರಿನಲ್ಲಿ ವಾಟ್ಸ್ಯಾಪ್ ಗ್ರೂಪ್ ಮೂಲಕ ಕಾರ್ಯಾಚರಿಸುವ ಈ ಜಾಲವು, ದೇಶಾದ್ಯಂತ ಸಾಮಾನ್ಯ ಸೇವಾ ಕೇಂದ್ರ ಯೋಜನೆ (ಸಿಎಸ್‌ಸಿಎಸ್)ಯಡಿ, ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗುತ್ತಿಗೆಗೆ ಪಡೆದುಕೊಂಡಿದ್ದ ಗ್ರಾಮೀಣ ಮಟ್ಟದ ಉದ್ಯಮ (ವಿಎಲ್‌ಇ) ನಿರ್ವಾಹಕರಿಗೆ ಈ ದತ್ತಾಂಶಗಳನ್ನು ಮಾರಾಟ ಮಾಡುತ್ತಿತ್ತು.
ಪ್ರಸ್ತುತ 1 ಲಕ್ಷಕ್ಕೂ ಅಧಿಕ ವಿಎಲ್‌ಇಗಳು ಯುಐಡಿಎಐ ದತ್ತಾಂಶಗಳನ್ನು ಅಕ್ರಮವಾಗಿ ಪಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ವಿಎಲ್‌ಇಗಳು, ಇಂತಹ ವಾಟ್ಸಪ್ ಗ್ರೂಪ್‌ಗಳ ಮೂಲಕ ಆಧಾರ್ ದತ್ತಾಂಶಗಳನ್ನು ಪಡೆದುಕೊಂಡು, ಆಧಾರ್ ಕಾರ್ಡ್‌ಗಳ ಮುದ್ರಣ ಸೇರಿದಂತೆ ಸಾಮಾನ್ಯ ಜನರಿಗೆ ಶುಲ್ಕ ರೂಪದಲ್ಲಿ ಆಧಾರ್ ಸೇವೆಗಳನ್ನು ನೀಡುತ್ತಿವೆ.
ಆಧಾರ್ ಸೋರಿಕೆ: ಭದ್ರತಾ ಉಲ್ಲಂಘನೆಯನ್ನು ಒಪ್ಪಿಕೊಂಡ ಚಂಡೀಗಢ ಯುಐಡಿಎಐ
ಈ ಬಗ್ಗೆ ಟ್ರಿಬ್ಯೂನ್ ಚಂಡೀಗಢದಲ್ಲಿನ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಆಧಾರ್‌ನ ಸಂಪೂರ್ಣ ದತ್ತಾಂಶಗಳನ್ನು ಆದರೆ ಇದೊಂದು ಮಹತ್ವದ ರಾಷ್ಟ್ರೀಯ ಭದ್ರತಾ ಉಲ್ಲಂಘನೆಯೆಂದು ಅವರು ಒಪ್ಪಿಕೊಂಡಿದ್ದಾರೆ. ಅವರು ತಕ್ಷಣವೇ ಈ ವಿಷಯವನ್ನು ಬೆಂಗಳೂರಿನಲ್ಲಿರುವ ಯುಐಎಡಿಐನ ತಾಂತ್ರಿಕ ಸಮಾಲೋಚಕರನ್ನು ಸಂಪರ್ಕಿಸಿ, ಈ ಬಗ್ಗೆ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ. ಇದೊಂದು ತಾಂತ್ರಿಕ ಲೋಪವೆಂಬುದನ್ನು ಚಂಡೀಗಢದ ಯುಐಡಿಎಐನ ಪ್ರಾದೇಶಿಕ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕ ಸಂಜಯ ಜಿಂದಾಲ್ ಒಪ್ಪಿಕೊಂಡಿದ್ದಾರೆ.
► ‘ಟ್ರಿಬ್ಯೂನ್’ ವರದಿ ತಳ್ಳಿಹಾಕಿದ ಕೇಂದ್ರ ಯುಡಿಐಎ
ಆದಾಗ್ಯೂ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಡಿಐಎ) ಗುರುವಾರ ಪ್ರತ್ಯೇಕ ಹೇಳಿಕೆ ನೀಡಿ, ಕೇವಲ 500 ರೂ.ಗೆ ಕೋಟ್ಯಂತರ ಪ್ರಜೆಗಳ ಆಧಾರ್ ವಿವರಗಳನ್ನು ಪಡೆಯಬಹುದೆಂಬ ಟ್ರಿಬ್ಯೂನ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಅಲ್ಲಗಳೆದಿದೆ. ಇದೊಂದು ತಪ್ಪಾದ ವರದಿಯೆಂದು ಅದು ಹೇಳಿಕೊಂಡಿದೆ. ಯಾವುದೇ ಆಧಾರ್ ದತ್ತಾಂಶಗಳ ಸೋರಿಕೆ ಯಾಗುತ್ತಿಲ್ಲವೆಂಬುದನ್ನು ಅದು ಸ್ಪಷ್ಟಪಡಿಸಿದೆ. ಪ್ರತಿಯೊಬ್ಬರ ಬಯೋಮೆಟ್ರಿಕ್ ಮಾಹಿತಿ ಸೇರಿದಂತೆ ಆಧಾರ್ ದತ್ತಾಂಶಗಳು ಸಂಪೂರ್ಣ ಸುರಕ್ಷಿತವಾಗಿದೆ ಹಾಗೂ ಸುಭದ್ರವಾಗಿದೆಯೆಂದು ಅದು ಹೇಳಿದೆ.