ಸಂಸ್ಥೆಗಳೇ ತ್ಯಾಜ್ಯ ವಿಲೇವಾರಿ ಮಾಡಿಕೊಳ್ಳುವ ಕಾನೂನು ಜಾರಿಗೆ ಚಿಂತನೆ: ಜಿಲ್ಲಾಧಿಕಾರಿ ಪ್ರಿಯಾಂಕ
ಉಡುಪಿ, ಜ.4: ನೂರು ಕೆ.ಜಿ.ಗಿಂತ ಹೆಚ್ಚು ತ್ಯಾಜ್ಯವನ್ನು ಉತ್ಪಾದಿಸುವ ಸಂಸ್ಥೆಗಳು ಆ ತ್ಯಾಜ್ಯವನ್ನು ತಮ್ಮಲ್ಲಿಯೇ ವಿಲೇವಾರಿ ಮಾಡಿಕೊಳ್ಳಬೇಕೆಂಬ ಕಡ್ಡಾಯ ನಿಯಮವನ್ನು ಕಾನೂನಿನ ಮೂಲಕ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಅಂತಹ ಸಂಸ್ಥೆಗಳು ತ್ಯಾಜ್ಯಗಳನ್ನು ನಗರಸಭೆ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳ ವಾಹನಗಳಿಗೆ ನೀಡಬಾರದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣಮಠದಲ್ಲಿ ಗುರುವಾರ ಜೈವಿಕ ತ್ಯಾಜ್ಯ ನಿರ್ವಹಣಾ ಘಟಕದ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಬಳಿಕ ಕನಕ ಮಂಟಪದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತಿದ್ದರು. ಶ್ರೀಕೃಷ್ಣಮಠದಲ್ಲಿ ಆಳವಡಿಸಿರುವ ಜೈವಿಕ ತ್ಯಾಜ್ಯ ನಿರ್ವ ಹಣಾ ಘಟಕದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ದೇವಸ್ಥಾನ, ಮಂದಿರ, ಕಲ್ಯಾಣ ಮಂಟಪ, ಸಂಸ್ಥೆಗಳಲ್ಲಿ ಈ ಘಟಕವನ್ನು ಸ್ಥಾಪಿಸುವಂತೆ ಸಲಹೆ, ಸೂಚನೆ ನೀಡಲಾಗುವುದು ಎಂದರು.
ಜೈವಿಕ ತ್ಯಾಜ್ಯ ನಿರ್ವಹಣಾ ಘಟಕದ ತಾಂತ್ರಿಕ ನಿರ್ದೇಶಕ ಮಾಯಂಕ್ ಮಾತನಾಡಿ, ಶ್ರೀಕೃಷ್ಣಮಠದಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದ ಜೈವಿಕ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕವು ದಿನಕ್ಕೆ ಗರಿಷ್ಠ ಒಂದು ಸಾವಿರ ಕೆ.ಜಿ. ಗೊಬ್ಬರ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇದಕ್ಕೆ ಕನಿಷ್ಠ 400 ಕೆ.ಜಿ. ತ್ಯಾಜ್ಯ ಅಗತ್ಯ ಬೇಕಾಗಿದೆ. ಮಠದಲ್ಲಿ ಪ್ರತಿದಿನ ಘಟಕಕ್ಕೆ ಬೇಕಾಗುವಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ಈ ಘಟಕವನ್ನು ಕಾಶೀ ವಿಶ್ವನಾಥಕ್ಷೇತ್ರ, ಗುವಾಹಾಟಿಯ ಕಾಮಾಕ್ಷಿ ದೇವಾಲಯ, ಕೋಲ್ಕತ್ತದ ಕಾಶಿಘಾಟ್ ಮೊದಲಾದ ದೇವಾಲಯ ಗಳಲ್ಲಿ ಸ್ಥಾಪಿಸಲಾಗಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಉಡುಪಿ ಮಠ ದಲ್ಲಿ ಸ್ಥಾಪಿಸಲಾಗಿದೆ. ಮುಂದೆ ಧರ್ಮಸ್ಥಳ, ತಿರುಪತಿ, ಕೊಲ್ಲೂರು ದೇವಸ್ಥಾನ ಗಳಲ್ಲೂ ಈ ಘಟಕವನ್ನು ಸ್ಥಾಪಿಸಲಾಗುವುದು ಎಂದರು.
ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಜಿಪಂ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಧನಂಜಯ, ಮಂಜುನಾಥ ಉಪಾಧ್ಯ, ಎಸ್‌ಎಸ್‌ಆರ್‌ಡಿಪಿ ಪ್ರೈ ಲಿಮಿಟೆಡ್‌ನ ಅನಿಲ್ ಕಪೂರ್ ಮೊದಲಾದವರು ಉಪಸ್ಥಿತರಿದ್ದರು.