×
Ad

ಕೊಲೆ, ಕೊಲೆಯತ್ನ ಪ್ರಕರಣ: ವಿವಿಧ ಸಂಘಟನೆಗಳ ಖಂಡನೆ

Update: 2018-01-04 22:36 IST

ಮಂಗಳೂರು, ಜ.4: ಕಾಟಿಪಳ್ಳದ ದೀಪಕ್ ರಾವ್‌ರ ಕೊಲೆ ಮತ್ತು ಆಕಾಶಭವನ ಬಶೀರ್, ಬಂದರ್‌ನ ಮುಬಶ್ಶಿರ್ ಕೊಲೆಯತ್ನ ಕೃತ್ಯವನ್ನು ವಿವಿಧ ಸಂಘಟನೆಗಳು ಖಂಡಿಸಿವೆ.

ಡಿವೈಎಫ್‌ಐ: ಕೋಮು ರಾಜಕಾರಣದ ಬೇಗುದಿಗೆ, ಕ್ಷುಲ್ಲಕ ಕಾರಣಗಳಿಗಾಗಿ ನಡೆಯುವ ಪ್ರೇರಿತ ಕೃತ್ಯ ಖಂಡನೀಯ ಎಂದು ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜಕೀಯ ತಂತ್ರಗಳಿಗೆ ಜಿಲ್ಲೆಯಲ್ಲಿ ಸಾವುಗಳನ್ನು ಬಯಸುವ ರಾಜಕಾರಣ ಮತ್ತು ಸತ್ತ ಕಾರ್ಯಕರ್ತರ ಸಾವಿಗೆ ಸೇಡೆಂಬಂತೆ ಜಿಲ್ಲೆಯ ಶಾಂತಿಯನ್ನು ಕದಡುವ ಪ್ರಯತ್ನದ ರಾಜಕಾರಣಿಗಳ ಕ್ರೂರ ಮನಸ್ಸುಗಳನ್ನು ಜಿಲ್ಲೆಯ ಜನತೆ ಅರ್ಥೈಸಿಕೊಂಡು ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಉಳಿಸಬೇಕಿದೆ.

ದೀಪಕ್‌ನ ಹತ್ಯೆಗೈದ ಹಂತಕರನ್ನು ಕೊಲೆ ನಡೆದು ಗಂಟೆಗಳೊಳಗೆ ಬಂಧಿಸಿದ ಪೊಲೀಸ್ ಕ್ರಮವನ್ನು ಶ್ಲಾಘಿಸಿದ ಡಿವೈಎಫ್‌ಐ ಪ್ರಶಂಸಿಸಿದೆ.

ದಿ ಮುಸ್ಲಿಂ ಸೆಂಟ್ರಲ್ ಕಮಿಟಿ: ದೀಪಕ್ ರಾವ್ ಹತ್ಯೆ ಮತ್ತು ಬಶೀರ್ ಹಾಗೂ ಮುಬಶ್ಶಿರ್‌ರ ಕೊಲೆಯತ್ನವನ್ನು ದ.ಕ.ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯು ತೀವ್ರವಾಗಿ ಖಂಡಿಸಿದೆ ಎಂದು ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.

ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕೊಲೆಗೀಡಾದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಪರಾಧಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು, ಸುಳ್ಳು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು ಎಂದು ಕರೆ ನೀಡಿದ್ದಾರೆ.

ಮುಸ್ಲಿಂ ಒಕ್ಕೂಟ: ದೀಪಕ್ ಹತ್ಯೆ, ಮುಬಶ್ಯಿರ್, ಬಶೀರ್‌ರ ಕೊಲೆಯತ್ನ ಕೃತ್ಯವನ್ನು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡಿಸಿದೆ. ಹತ್ಯೆ ಘಟನೆಯ ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸಿರುವುದು ಶ್ಲಾಘನೀಯ. ನಂತರದ ಹಲ್ಲೆ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಬೇಕಿದೆ. ಜಿಲ್ಲೆಯ ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮತ್ತು ಗೊಂದಲಗಳಿಗೆ ಅವಕಾಶ ನೀಡಬಾರದಾಗಿ ಮತ್ತು ಶಾಂತಿ ಪಾಲಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್: ದೀಪಕ್ ರಾವ್ ಹತ್ಯೆ ಹಾಗೂ ಇಬ್ಬರ ಮಾರಣಾಂತಿಕ ಹಲ್ಲೆ ಖಂಡನೀಯವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಅಥರುಲ್ಲಾಹ್ ಶರೀಫ್ ಆಗ್ರಹಿಸಿದ್ದಾರೆ. ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿರುವ ಅವರು, ಸಮುದಾಯವವು ಅವರ ಕುಟುಂಬದ ಜತೆಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹ ಮಾಡುವುದು ರಾಜಕೀಯ ಅಸ್ತ್ರವಾಗಬಾರದು. ಯಾರೂ ಈ ಸಂದರ್ಭ ಪ್ರಚೋದನೆಗೊಳಾಗಬಾರದು, ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾಗಬಾರದು, ನೆಲದ ಕಾನೂನಿಗೆ ಗೌರವ ಕೊಟ್ಟು ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಅವರು ಜನತೆಗೆ ಕರೆಕೊಟ್ಟಿದ್ದಾರೆ.

ಮಾನವ್ ಸಮಾನತಾ ಮಂಚ್: ದ.ಕ.ಜಿಲ್ಲೆಯಲ್ಲಿ ಕಳೆದ ಕೆಲವು ದಿನದಿಂದ ಅಹಿತಕರ ಘಟನೆ ನಡೆಯುತ್ತಿರುವುದು ವಿಷಾದನೀಯ. ಚುನಾವಣೆ ಸಂದರ್ಭ ಇದು ಮಿತಿ ಮೀರುವ ಅಪಾಯವಿದೆ. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕರನ್ನು ಬಲಿ ಪಡೆಯುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಈ ಅಪಾಯವನ್ನು ಅರಿತು ಪೊಲೀಸ್ ಇಲಾಖೆಯು ದಿಟ್ಟ ಹೆಜ್ಜೆ ಇಡಬೇಕಿದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಅಪರಾಧಿಗಳ ಜಾತಿ, ಧರ್ಮ ನೋಡದೆ ಕಠಿಣ ಕ್ರಮ ಜರಗಿಸಬೇಕು ಎಂದು ಮಾನವ್ ಸಮಾನತಾ ಮಂಚ್‌ನ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News