ಕೊರಿಯಗಳ ನಡುವೆ ಹಾಟ್‌ಲೈನ್ ಪುನಾರಂಭ: ವಿಶ್ವಸಂಸ್ಥೆ ಸ್ವಾಗತ
Update: 2018-01-04 22:46 IST
ವಿಶ್ವಸಂಸ್ಥೆ, ಜ. 4: ಉತ್ತರ ಮತ್ತು ದಕ್ಷಿಣ ಕೊರಿಯಗಳ ನಡುವಿನ ಹಾಟ್‌ಲೈನ್ (ನೇರ ಫೋನ್ ಸಂಪರ್ಕ)ಗೆ ಮರುಚಾಲನೆ ದೊರಕಿರುವುದಕ್ಕೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೊರಿಯ ಪರ್ಯಾಯ ದ್ವೀಪದ ಪರಮಾಣು ಬಿಕ್ಕಟ್ಟಿನ ನಿವಾರಣೆಗೆ ಹೆಚ್ಚಿನ ರಾಜತಾಂತ್ರಿಕ ಕ್ರಮಗಳ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
2016ರಿಂದ ಸ್ಥಗಿತಗೊಂಡಿದ್ದ ಸಂಪರ್ಕ ಸೇತುವಿಗೆ ದಕ್ಷಿಣ ಮತ್ತು ಉತ್ತರ ಕೊರಿಯಗಳು ಬುಧವಾರ ಮರುಚಾಲನೆ ನೀಡಿದವು.
‘‘ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯ (ಉತ್ತರ ಕೊರಿಯ) ಮತ್ತು ರಿಪಬ್ಲಿಕ್ ಆಫ್ ಕೊರಿಯ (ದಕ್ಷಿಣ ಕೊರಿಯ)ಗಳ ನಡುವೆ ಮಾತುಕತೆ ನಡೆಯುವುದು ಯಾವತ್ತೂ ಉತ್ತಮ ಬೆಳವಣಿಗೆಯಾಗಿದೆ’’ ಎಂದು ವಿಶ್ವಸಂಸ್ಥೆಯ ವಕ್ತಾರ ಫರ್ಹಾನ್ ಹಕ್ ಹೇಳಿದರು.
‘‘ಕೊರಿಯಗಳ ನಡುವಿನ ಸಂಪರ್ಕ ಸೇತುವಿಗೆ ಮರುಚಾಲನೆ ಲಭಿಸಿರುವುದನ್ನು ಗುಟರಸ್ ಸ್ವಾಗತಿಸುತ್ತಾರೆ’’ ಎಂದರು.