×
Ad

ಬಸ್ ನಿಂದ ಹೊರಕ್ಕೆಸೆಯಲ್ಪಟ್ಟು ತುಂಬು ಗರ್ಭಿಣಿ ಮೃತ್ಯು

Update: 2018-01-05 19:28 IST

ತಿರುವನಂತಪುರ,ಜ.5: 34ರ ಹರೆಯದ ಗರ್ಭಿಣಿಯೋರ್ವರು ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟು ಸಾವನ್ನಪ್ಪಿರುವ ಘಟನೆ ಕೊಟ್ಟಾಯಮ್‌ನಲ್ಲಿ ನಡೆದಿದೆ. ಮೃತ ನಶೀದಾ ಒಂಭತ್ತು ತಿಂಗಳ ತುಂಬು ಗರ್ಭವತಿಯಾಗಿದ್ದು, ಬಸ್ಸಿನಲ್ಲಿದ್ದ ಯಾರೂ ಆಕೆಗೆ ಸೀಟ್ ಬಿಟ್ಟುಕೊಟ್ಟಿರಲಿಲ್ಲ, ಹೀಗಾಗಿ ಅವರು ನಿಂತುಕೊಂಡೇ ಪ್ರಯಾಣಿಸಿದ್ದರು.

ಡಿ.29ರಂದು ತೀಕೊಯಿಯಿಂದ ಎರತ್ತುಪೆಟ್ಟಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್‌ನ್ನು ನಶೀದಾ ಹತ್ತಿದ್ದರು. ಬಸ್ ಏಕಾಏಕಿ ಯು-ಟರ್ನ್ ಪಡೆದುಕೊಂಡಾಗ ಬಾಗಿಲ ಬಳಿ ನಿಂತಿದ್ದ ಅವರು ಆಯ ತಪ್ಪಿ ಹೊರಕ್ಕೆಸೆಯಲ್ಪಟ್ಟಿದ್ದರು. ಬಸ್ಸಿನ ಬಾಗಿಲನ್ನು ಮುಚ್ಚಲಾಗಿ ರಲಿಲ್ಲ. ತಲೆಗೆ ಗಂಭೀರ ಗಾಯಗಳಾಗಿದ್ದ ಆಕೆ ಆಸ್ಪತ್ರೆಯಲ್ಲಿ ಐದು ದಿನಗಳ ಜೀವನ್ಮರಣ ಹೋರಾಟದ ಬಳಿಕ ಕೊನೆಗೂ ಅಸು ನೀಗಿದ್ದಾರೆ.

ನಶೀದಾ ಅವರ ನವಜಾತ ಶಿಶುವು ಆರೋಗ್ಯಯುತವಾಗಿದ್ದು, ದೇಹಸ್ಥಿತಿ ಸ್ಥಿರವಾಗಿದೆ. ಅದನ್ನು ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಲಾಗಿದೆ.

ನಶೀದಾಗೆ 10 ಮತ್ತು ನಾಲ್ಕೂವರೆ ವರ್ಷ ಪ್ರಾಯದ ಇನ್ನಿಬ್ಬರು ಮಕ್ಕಳಿದ್ದು, ಈ ಅಪಘಾತದಿಂದ ಅವರ ಕುಟುಂಬಕ್ಕೆ ಬರಸಿಡಿಲು ಎರಗಿದಂತಾಗಿದೆ.

“ನನ್ನ ಮಕ್ಕಳು ಆಘಾತದಿಂದ ಹೊರಬಂದಿಲ್ಲ. ತನ್ನ ತಾಯಿ ಎಲ್ಲಿ ಎಂದು ಕಿರಿಯ ಮಗಳು ಕೇಳುತ್ತಿರುತ್ತಾಳೆ. ಅವಳಿಗೆ ಸಾವು ಎಂದರೆ ಏನು ಎನ್ನುವುದೂ ಗೊತ್ತಿಲ್ಲ. ನಾನು ನನ್ನ ಮಕ್ಕಳಿಗೆ ಏನು ಹೇಳಲಿ” ಎಂದು ದುಃಖತಪ್ತ ಪತಿ ತಾಹಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News