×
Ad

'ಜ.8: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 581 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ'

Update: 2018-01-05 21:00 IST

ಉಡುಪಿ, ಜ.5: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 8ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಪರಾಹ್ನ 2 ಗಂಟೆಗೆ ಒಟ್ಟು 581 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 509 ಕೋಟಿ ರೂ.ಮೊತ್ತದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ 72 ಕೋಟಿ ರೂ.ಮೊತ್ತದ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದವರು ತಿಳಿಸಿದರು.

ಕಾರ್ಯಕ್ರಮ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ನಡೆಯಲಿದ್ದು, ಇದರಲ್ಲಿ 95ಸಿ, 94ಸಿಸಿಯಲ್ಲಿ ಹಕ್ಕುಪತ್ರಗಳ ವಿತರಣೆಯೂ ಸೇರಿದಂತೆ ಸರಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆಯನ್ನು ಸಹ ಅವರು ಮಾಡಲಿರುವರು ಎಂದು ಪ್ರಮೋದ್ ತಿಳಿಸಿದರು.

ಮುಖ್ಯಮಂತ್ರಿಗಳು ಉದ್ಘಾಟಿಸುವ ಯೋಜನೆಗಳಲ್ಲಿ ಸೀತಾನದಿಗೆ ಅಡ್ಡಲಾಗಿ 9 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ನೀಲಾವರ ಪಂಚಮಿಖಾನಾದಲ್ಲಿ ನಿರ್ಮಿಸಿರುವ ಸೇತುವೆ ಹಾಗೂ ರಸ್ತೆ, ಮಣಿಪಾಲದಲ್ಲಿ 1.50ಕೋಟಿ ರೂ. ವೆಚ್ಚದ ಜಿಪಂ ತರಬೇತಿ ಕೇಂದ್ರ, 49 ಕೋಟಿ ರೂ.ವೆಚ್ಚದ ಮಲ್ಪೆ ಮೂರನೇ ಹಂತದ ಜಟ್ಟಿ ಕಾಮಗಾರಿ, ಮೂರು ಕೋಟಿ ರೂ.ವೆಚ್ಚದ ರಾ.ಹೆದ್ದಾರಿ 66ರಿಂದ ಕೃಷಿಕೇಂದ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸೇರಿವೆ ಎಂದರು.

ಇನ್ನು ಶಿಲಾನ್ಯಾಸ ನೆರವೇರಿಸುವ ಕಾಮಗಾರಿಗಳಲ್ಲಿ ಎಡಿಬಿ ಮತ್ತು ಅಮೃತ್ ಯೋಜನೆಯಡಿ ಉಡುಪಿ ನಗರಸಭೆಗೆ ನೀರು ಸರಬರಾಜು ಹಾಗೂ ಒಳಚರಂಡಿ ಜಾಲ ವಿಸ್ತರಣೆಗೆ ಒಟ್ಟು 370 ಕೋಟಿ ರೂ. (184.10+ 185.90), ವಾರಾಹಿಯಿಂದ ಉಡುಪಿಗೆ ಕುಡಿಯುವ ನೀರು ತರುವ 270 ಕೋಟಿ ರೂ. ಮೊತ್ತದ ಯೋಜನೆ, ರಾಜ್ಯ ವಿಶೇಷ ಅನುದಾನದಡಿ ಉಡುಪಿ ನಗರದಲ್ಲಿ ಚರಂಡಿ ಹಾಗೂ ರಸ್ತೆ ಅಭಿವೃದ್ಧಿಯ 10 ಕೋಟಿ ರೂ.ಕಾಮಗಾರಿ, ನಗರೋತ್ಧಾನ ಹಂತ-3ರಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಒಳಚರಂಡಿ ಹಾಗೂ ಇತರ ಕಾಮಗಾರಿಗೆ 35 ಕೋಟಿ ರೂ.ಯೋಜನೆ ಸೇರಿವೆ.

ಅಲ್ಲದೇ 31ಕೋಟಿ ರೂ.ವೆಚ್ಚದಲ್ಲಿ ಉಡುಪಿಗೆ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಸೀತಾನದಿಗೆ ಅಡ್ಡಲಾಗಿ ಆವರ್ಸೆ-ಅಮಮರ್ಕಲ್- ಬೆಳ್ವೆ- ಮದ್ದೂರು-ಮಿಯಾರು ರಸ್ತೆಯಲ್ಲಿ 13 ಕೋಟಿ ರೂ.ವೆಚ್ಚದ ಸೇತುವೆ ನಿರ್ಮಾಣ, ಬ್ರಹ್ಮಾವರದ ಗಾಂಧಿ ಮೈದಾನದ 5.5 ಎಕರೆ ಪ್ರದೇಶವನ್ನು ಕ್ರಿಕೆಟ್ ಸ್ಟೇಡಿಯಂ ಆಗಿ ಅಭಿವೃದ್ಧಿ, ಎರಡು ಕೋಟಿ ರೂ.ವೆಚ್ಚದಲ್ಲಿ ಉಡುಪಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜಿಮ್ನೇಶಿಯಂನ ನಿರ್ಮಾಣ, ಮೂರು ಕೋಟಿ ರೂ.ವೆಚ್ಚದಲ್ಲಿ ಗೋರಪಳ್ಳಿ ಸೇತುವೆ ನಿರ್ಮಾಣ ಕಾಮಗಾರಿಯೂ ಸೇರಿವೆ ಎಂದವರು ವಿವರಿಸಿದರು.

ಮುಖ್ಯಮಂತ್ರಿಗಳು ಒಟ್ಟು 9 ಕೋಟಿ ರೂ.ವೆಚ್ಚದಲ್ಲಿ ಪೆರಂಪಳ್ಳಿ- ಪಾಸ್‌ಕುದ್ರು ಸೇತುವೆ ಹಾಗೂ ಕೆಮ್ಮಣ್ಣಿನಲ್ಲಿ ತಿಮ್ಮನಕುದ್ರು ಬಳಿ ಸೇತುವೆ ನಿರ್ಮಾಣಕ್ಕೆ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 12 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸುವರು. ಅಲ್ಲದೇ 75 ಲಕ್ಷ ರೂ.ವೆಚ್ಚದಲ್ಲಿ ಕಲ್ಸಂಕ ಬಳಿ ಕಿರುಸೇತುವೆ ನಿರ್ಮಾಣಕ್ಕೂ ಅವರು ಚಾಲನೆ ನೀಡುವರು ಎಂದರು.

ಒಳಾಂಗಣ ಕ್ರೀಡಾಂಗಣಕ್ಕೆ ಹವಾ ನಿಯಂತ್ರಣ (1.21ಕೋಟಿ) ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ (3.14)ಕ್ಕೂ ಅವರು ಬ್ರಹ್ಮಾವರದ ಸಮಾರಂಭದಲ್ಲೇ ಶಿಲಾನ್ಯಾಸ ನೆರವೇರಿಸುವರು ಎಂದರು.

ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News