270 ಕೋಟಿ ರೂ. ವೆಚ್ಚದಲ್ಲಿ ವಾರಾಹಿ ನೀರು ಉಡುಪಿಗೆ
ಉಡುಪಿ, ಜ.5: ವರ್ಷದ 365 ದಿನವೂ ಧಾರಾಳ ನೀರು ಲಭ್ಯವಿರುವ ವಾರಾಹಿ ನದಿಯಿಂದ ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ 270 ಕೋಟಿ ರೂ.ಗಳ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.8ರಂದು ಶಿಲಾನ್ಯಾಸ ನೆರವೇರಿಸುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ನಗರಕ್ಕೆ ನೀರು ಒದಗಿಸುವ ಸ್ವರ್ಣ ನದಿ ಕಳೆದೆರಡು ವರ್ಷಗಳಿಂದ ಎಪ್ರಿಲ್ ತಿಂಗಳ ಬಳಿಕ ಒಣಗತೊಡಗಿ ಜನತೆಗೆ ಕುಡಿಯುವ ನೀರಿನ ಸರಬರಾಜು ಸಮಸ್ಯೆಯಾಗಿ ಪರಿಣಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಸ್ವರ್ಣ ನದಿಗೆ ಹಿರಿಯಡ್ಕ ಸಮೀಪ ಬಜೆ ಹಾಗೂ ಶಿರೂರಿನಲ್ಲಿ ಎರಡು ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಸಂಗ್ರಹಿಸುತಿದ್ದರೂ, ಬೇಸಿಗೆಯ ಕೊನೆಯ ಎರಡು ತಿಂಗಳ ಕುಡಿಯುವ ನೀರಿಗೂ ತತ್ವಾರವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪೆರಂಪಳ್ಳಿ ಶೀಂಬ್ರಾ ಬಳಿ ಮೂರನೇ ಅಣೆಕಟ್ಟು ಕಟ್ಟಿ ಇನ್ನಷ್ಟು ನೀರು ಸಂಗ್ರಹಿಸಿಡುವ ಯೋಜನೆ ತಾಂತ್ರಿಕ ಕಾರಣಗಳಿಗಾಗಿ ಕಾರ್ಯಸಾಧುವಲ್ಲ ಎಂದು ತಜ್ಞರ ತಂಡ ವರದಿ ನೀಡಿರುವ ಹ್ನಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಹೆಚ್ಚುತ್ತಿರುವ ನೀರಿನ ಸಂಪರ್ಕದ ಬೇಡಿಕೆ ಹಾಗೂ ನಗರಕ್ಕೆ 24 ಗಂಟೆಯೂ ನೀರು ಸರಬರಾಜು ಮಾಡುವ ಅನಿವಾರ್ಯತೆಯಿಂದ ವಾರಾಹಿಯಿಂದಲೇ ನೀರು ತರಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಾರಾಹಿ ನೀರನ್ನು ಸುಮಾರು 40 ಕಿ.ಮೀ. ಉದ್ದದ ಪೈಪ್‌ಗಳ ಮೂಲಕ ತರಿಸಿ ಬಜೆಗೆ ತರಿಸಿ ಅಲ್ಲಿನ ನೀರು ಶುದ್ಧೀಕರಣ ಘಟಕದಲ್ಲಿ ನೀರನ್ನು ಶುದ್ಧಗೊಳಿಸಿ ನಗರಕ್ಕೆ ಸರಬರಾಜು ಮಾಡುವ ಯೋಜನೆ ಇದಾಗಿದೆ. ಇದಕ್ಕಾಗಿ ಈಗಾಗಲೇ ಡಿಪಿಆರ್ ಸಿದ್ಧವಾಗಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು.
ವಾರಾಹಿ ನೀರನ್ನು ಉಡುಪಿಗೆ ತರುವುದರಿಂದ ನಗರಸಭಾ ವ್ಯಾಪ್ತಿಯ ಜನತೆಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ನೀಡಲು ಸಾಧ್ಯವಾಗಲಿದೆ. ಈ ಮೂಲಕ ಉಡುಪಿ ವಿಧಾನಸಭಾ ವ್ಯಾಪ್ತಿಗೆ 24ಗಂಟೆಯೂ ನಿರಂತರವಾಗಿ ನೀರು ಮತ್ತು ವಿದ್ಯುತ್ ನೀಡುವ ತನ್ನ ಚುನಾವಣಾ ವಾಗ್ದಾನವನ್ನು ಪೂರ್ಣಗೊಳಿಸಲು ಸಾದ್ಯವಾಗಲಿದೆ ಎಂದರು.
ಉಡುಪಿ ಪರ್ಯಾಯಕ್ಕಾಗಿ ಮುಖ್ಯಮಂತ್ರಿಗಳು 10 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ ಎಂದಿರುವ ಅವರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಯೊಂದು ಕೇಂದ್ರದ ಸಕ್ಕರೆ ಮಂತ್ರಾಲಯಕ್ಕೆ ಹೋಗಿದ್ದು, ಒಪ್ಪಿಗೆಯ ನಿರೀಕ್ಷೆ ಯಲ್ಲಿದ್ದೇವೆ ಎಂದರು.
ದೀಪಕ್ ಹತ್ಯೆ: ಪ್ರಮೋದ್ ಖಂಡನೆ
ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಯುವಕ ದೀಪಕ್ ರಾಜ್‌ರ ಬರ್ಬರ ಹತ್ಯೆಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸುವುದಾಗಿ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಹಿಂಸೆ, ಕೊಲೆಯನ್ನು ಯಾವುದೇ ಮತ-ಧರ್ಮದವರು ನಡೆಸಿರಲಿ ಅದು ಖಂಡನಾರ್ಹ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರ ಜೀವಕ್ಕೂ ಬೆಲೆಯಿದೆ. ಆದುದರಿಂದ ಆರೋಪಿಗಳು ಯಾರೇ ಆಗಿದ್ದರೂ ಅವರ ವಿರುದ್ಧ ಉಗ್ರಕ್ರಮ ಕೈಗೊಳ್ಳಲೇಬೇಕು. ಇಂಥ ಘಟನೆ ಮರುಕಳಿಸದಂತೆ ಎಲ್ಲಾ ಜಾತಿ, ಪಕ್ಷ, ಧರ್ಮ, ಸಮುದಾಯದವರು ಒಟ್ಟಾಗಬೇಕು ಎಂದರು.
ಬುದ್ಧಿವಂತರ ಜಿಲ್ಲೆ ಎನಿಸಿದ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಇಂಥ ಘಟನೆ, ಕೊಲೆ, ಹಿಂಸೆ ನಡೆಯಲೇಬಾರದು ಎಂದರು. ಇದರಿಂದ ಕಾಂಗ್ರೆಸ್‌ಗೆ ರಾಜಕೀಯ ಹಿನ್ನಡೆಯಾಗುವುದೇ ಎಂದು ಪ್ರಶ್ನಿಸಿದಾಗ, ರಾಜಕಾರಣಿಗಳಿಗಿಂತ ಜನರು ಬುದ್ಧಿವಂತರಿದ್ದಾರೆ. ರಾಜಕೀಯ ಲಾಭಕ್ಕಾಗಿ ಯಾರು ಹತ್ಯೆ ಮಾಡುತಿದ್ದಾರೆ ಎಂದು ತುಲನೆ ಮಾಡುವ ಶಕ್ತಿ ಜನರಿಗುಂಟು. ಜನರ ಬುದ್ಧಿವಂತಿಕೆ ಮೇಲೆ ನನಗೆ ಅಚಲ ವಿಶ್ವಾಸವಿದೆ ಎಂದರು.
ಜನರು ಅಲ್ಪಕಾಲಕ್ಕೆ ಕೆಲವರ ಮಾತಿಗೆ ಮರಳಾಗಬಹುದು. ಆದರೆ ಸತ್ಯ ಹೊರಬಂದ ಬಳಿಕ ಅವರು ತಿರುಗಿ ಬೀಳುತ್ತಾರೆ. ರಾಜಕೀಯ ಲಾಭ ಪಡೆಯು ವವರಿಗೆ ಇದು ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದರು.
ಲೈಟ್ ಫಿಶಿಂಗ್: ಕೇಂದ್ರಕ್ಕೆ ಪತ್ರ
ರಾಜ್ಯ ಸರಕಾರಗಳ ಅಭಿಪ್ರಾಯವನ್ನು ಕೇಳದೇ ಕೇಂದ್ರ ಸರಕಾರ ಬೆಳಕು ಕೇಂದ್ರಿತ ಮೀನುಗಾರಿಕೆ (ಲೈಟ್ ಫಿಶಿಂಗ್) ಕುರಿತಂತೆ ಅಧಿಸೂಚನೆಯನ್ನು ಹೊರಡಿಸಿದ್ದು, ಇದನ್ನು ವಿರೋಧಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ ಎಂದು ಪ್ರಮೋದ್ ತಿಳಿಸಿದರು.
ಕಡಲ ಮೀನುಗಾರಿಕೆ ನಡೆಸುವ ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಅಭಿಪ್ರಾಯವನ್ನು ಪಡೆದು ಯಾವುದೇ ಆದೇಶ ಹೊರಡಿಸಬೇಕು. ಆದರೆ ಈ ವಿಷಯದಲ್ಲಿ ಕೇವಲ ಗೋವಾದ ಅಭಿಪ್ರಾಯ ಪಡೆಯಲಾಗಿದೆ. ನಮ್ಮನ್ನು ಕತ್ತಲಲ್ಲಿಟ್ಟು ಈ ಆದೇಶ ಹೊರಡಿಸಲಾಗಿದೆ. ಯಾವುದೇ ಆದೇಶ ಹೊರಡಿಸುವ ಮುನ್ನ ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದರು.