ಮಿಲೆನಿಯಮ್ ವೋಟರ್: ಹೆಸರು ದಾಖಲಿಸಲು ದಿನಾಂಕ ವಿಸ್ತರಣೆ
ಉಡುಪಿ, ಜ.5: ಮಿಲೆನಿಯಮ್ ವೋಟರ್‌ಗಳಾಗಿ ಹೆಸರು ನೊಂದಾಯಿಸಲು ಜಿಲ್ಲೆಯಲ್ಲಿ 1.1.2000ದಂದು ಹುಟ್ಟಿದ ಮಕ್ಕಳಿಗೆ ನೀಡಿರುವ ಅವಕಾಶವನ್ನು ಜ.15ರವರೆಗೆ ವಿಸ್ತರಿಸಲಾಗಿದೆ ಎಂದು ಸ್ವೀಪ್ (ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಅಂಡ್ ಎಲೆಕ್ಟ್ರೋರಲ್ ಪಾರ್ಟಿಸಿಪೇಷನ್) ಸಮಿತಿ ಅಧ್ಯಕ್ಷ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಶುಕ್ರವಾರ ಜಿಪಂ ಕಚೇರಿಯಲ್ಲಿ ಸ್ವೀಪ್ ಸಭೆ ನಡೆಸಿದ ಅವರು, ಯುವ ಮತದಾರರ ಹೆಸರು ನೋಂದಾಯಿಸುವಿಕೆ ಸಂಬಂಧ ಕೈಗೊಳ್ಳಬೇಕಾದ ಮಾಹಿತಿ ಹಾಗೂ ಕರ್ತವ್ಯಗಳ ಬಗ್ಗೆ ಸ್ವೀಪ್ ಸಮಿತಿಯ ಸದ್ಯರಿಗೆ ಮನವರಿಕೆ ಮಾಡಿ ಕೊಟ್ಟರು.
ಮತದಾನದ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಬದಲಾವಣೆ ಬಗ್ಗೆ ಅರಿವು ಮೂಡಿಸಲು ಹಾಗೂ ಮತದಾನದಲ್ಲಿ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕೊಲಾಜ್, ಭಿತ್ತಿಪತ್ರ ಹಾಗೂ ಪ್ರಬಂಧ ಸ್ಫರ್ಧೆ ಯನ್ನು ಆಯೋಜಿಸುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಪ್ರೌಢಶಾಲೆ, ಪಿಯುಸಿ ಮತ್ತು ಡಿಗ್ರಿ ಓದುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆಯನ್ನು ಆಯೋಜಿಸಿದ್ದು, ಇತ್ತೀಚೆಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯ ದಿಂದ ಗದಗ ಜಿಲ್ಲೆಯ ವಿದ್ಯಾರ್ಥಿಗಳು ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಲು ಸೂಕ್ತ ಮಾಹಿತಿ ನೀಡುವಂತೆ ಕಾಪಶಿ ಅಧಿಕಾರಿಗಳಿಗೆ ಸೂಚಿಸಿದರು. ಚುನಾವಣಾ ಆಯೋಗದಿಂದ ಬಂದ ಎಲ್ಲ ನಿರ್ದೇಶನಗಳನ್ನು ಗಮನದಲ್ಲಿರಿಸಿ ಈ ಸಾಲಿನ ಸ್ವೀಪ್ ಯೋಜನೆಯನ್ನು ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.