ಭಯೋತ್ಪಾದಕರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳದ ಪಾಕಿಸ್ತಾನ: ಭದ್ರತಾ ನೆರವು ಸ್ಥಗಿತಗೊಳಿಸಿದ ಅಮೆರಿಕ

Update: 2018-01-05 16:12 GMT

ವಾಷಿಂಗ್ಟನ್,ಜ.5: ಪಾಕಿಸ್ತಾನಕ್ಕೆ ಭಾರೀ ಮುಖಭಂಗವನ್ನುಂಟು ಮಾಡಿರುವ ಮಹತ್ವದ ಬೆಳವಣಿಗೆಯೊಂದರಲ್ಲಿ ಅದಕ್ಕೆ ಭದ್ರತಾ ನೆರವನ್ನು ಅಮೆರಿಕವು ಸ್ಥಗಿತಗೊಳಿ ಸಿದೆ. ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ, ಮುಖ್ಯವಾಗಿ ಹಕ್ಕಾನಿ ಭಯೋತ್ಪಾದಕ ಗುಂಪಿನ ವಿರುದ್ಧ ಹೋರಾಟದ ನಿರ್ಣಾಯಕ ಕ್ರಮದ ದೃಢವಾದ ಪುರಾವೆಯನ್ನು ಒದಗಿಸುವವರೆಗೂ ಅದಕ್ಕೆ ಕನಿಷ್ಠ 1.15 ಶತಕೋಟಿ ಡಾ.ಗಳ ಭದ್ರತಾ ನೆರವನ್ನು ನಿಲ್ಲಿಸಲಾಗುವುದು ಎಂದು ಅಮೆರಿಕವು ಗುರುವಾರ ತಿಳಿಸಿದೆ.

ನೆರವನ್ನು ಮರಳಿ ಪಡೆಯಲು ಪಾಕಿಸ್ತಾನವು ಕೈಗೊಳ್ಳಬೇಕಾದ ಕ್ರಮಗಳನ್ನು ಅಮೆರಿಕವು ನಿರ್ದಿಷ್ಟವಾಗಿ ಹೇಳಿಲ್ಲ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ, ಅಗತ್ಯವಾದರೆ ಅಮೆರಿಕ ದಿಂದ ಮಿಲಿಟರಿ ಉಪಕರಣಗಳನ್ನು ಖರೀದಿಸಲು ಪಾಕಿಸ್ತಾನಕ್ಕೆ ಈ ನೆರವನ್ನು ನೀಡಲಾಗು ತ್ತಿದೆ. ಅಮೆರಿಕದ ಈ ನಿರ್ಧಾರದಿಂದಾಗಿ ಆ ರಾಷ್ಟ್ರದಿಂದ ಖರೀದಿಗಾಗಿ ಪಾಕಿಸ್ತಾನಕ್ಕೆ ಸಾಲ ಸೌಲಭ್ಯವನ್ನೊದಗಿಸುವ ವಿದೇಶಿ ಮಿಲಿಟರಿ ಆರ್ಥಿಕ ನೆರವು(ಎಫ್‌ಎಂಎಫ್) ಮತ್ತು ಅಫಘಾನಿಸ್ತಾನದಲ್ಲಿ ಮಿತ್ರಪಡೆಗಳ ಬೆಂಬಲಕ್ಕಾಗಿ ನೀಡಲಾಗುತ್ತಿರುವ ಮೈತ್ರಿಕೂಟ ಬೆಂಬಲ ನಿಧಿ(ಸಿಎಸ್‌ಎಫ್) ಬಾಧಿತವಾಗಲಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯು ತಿಳಿಸಿದೆ.

ಪಾಕಿಸ್ತಾನಕ್ಕೆ ಸ್ಥಗಿತಗೊಳಿಸಲಾಗಿರುವ ಭದ್ರತಾ ನೆರವಿನ ಒಟ್ಟು ಮೊತ್ತ 1.15 ಶತಕೋಟಿ ಡಾ.ಗಳಾಗಬಹುದು ಎಂದು ಕೆಲವು ಅಂದಾಜುಗಳು ಹೇಳಿವೆ. ಸಿಎಸ್‌ಎಫ್ ಅಡಿ 2017ನೇ ಸಾಲಿಗೆ 900 ಮಿ.ಡಾ. ಮತ್ತು 2018ನೇ ಸಾಲಿಗೆ 700 ಮಿ.ಡಾ. ನೆರವನ್ನು ನಿಗದಿ ಪಡಿಸಲಾಗಿದ್ದು, ಈಗ ಇವು ಅಮಾನತುಗೊಂಡಿವೆ. ಈ ಅಂದಾಜು ಗಳಲ್ಲಿ ಈಗಾಗಲೇ ಸ್ಥಗಿತಗೊಳಿಸಲಾಗಿರುವ ಎಫ್‌ಎಂಎಫ್ ಅಡಿಯ 255 ಮಿ.ಡಾ. ನೆರವು ಕೂಡ ಸೇರಿದೆ.

ನಿಖರವಾಗಿ ಎಷ್ಟು ಮೊತ್ತದ ಭದ್ರತಾ ನೆರವನ್ನು ಸ್ಥಗಿತಗೊಳಿಸಲಾಗಿದೆ ಎನ್ನುವುದನ್ನು ತಿಳಿಸಲು ವಿದೇಶಾಂಗ ಇಲಾಖೆಯು ನಿರಾಕರಿಸಿದೆ. ಅದನ್ನು ನಾವಿನ್ನೂ ಲೆಕ್ಕ ಹಾಕುತ್ತಿದ್ದೇವೆ ಎಂದು ಇಲಾಖೆಯ ವಕ್ತಾರರಾದ ಹೀದರ್ ನೌರ್ಟ್ ತಿಳಿಸಿದರು.

ಆದರೆ 2002ರಿಂದ ಒಟ್ಟು 33 ಶತಕೋಟಿ ಡಾ.ಗಳ ಪೈಕಿ 11 ಶತಕೋಟಿ ಡಾ.ಗಳ ಆರ್ಥಿಕ ನೆರವು ಅಬಾಧಿತವಾಗಿ ಮುಂದುವರಿಯುತ್ತದೆ ಎಂದು ವಿದೇಶಾಂಗ ಇಲಾಖೆಯ ಹೇಳಿಕೆಯು ಸ್ಪಷ್ಟಪಡಿಸಿದೆ.

 ಅಮೆರಿಕವು ಕೋರಿಕೊಂಡಂತೆ ಮತ್ತು ಪಾಕಿಸ್ತಾನದ ನಾಯಕರು ಭರವಸೆ ನೀಡಿದ್ದಂತೆ ತನ್ನ ನೆಲದಲ್ಲಿನ ಭಯೋತ್ಪಾದಕ ಮತ್ತು ಉಗ್ರಗಾಮಿ ಗುಂಪುಗಳ ವಿರುದ್ಧ ಆ ರಾಷ್ಟ್ರವು ಅಗತ್ಯ ನಿರ್ಣಾಯಕ ಕ್ರಮವನ್ನು ಕೈಗೊಂಡಿಲ್ಲ ಎನ್ನುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀರ್ಮಾನವನ್ನು ಭದ್ರತಾ ನೆರವನ್ನು ಸ್ಥಗಿತಗೊಳಿಸುವ ನಿರ್ಧಾರವು ಪ್ರತಿಬಿಂಬಿ ಸುತ್ತಿದೆ ಎಂದೂ ಅದು ಹೇಳಿದೆ.

ಹೊಸವರ್ಷದ ದಿನದಂದು ಟ್ವೀಟ್ ಮೂಲಕ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ್ದ ಟ್ರಂಪ್, ಅಮೆರಿಕದಿಂದ 33 ಶತಕೋಟಿ ಡಾ.ನೆರವು ಪಡೆಯುತ್ತಿರುವ ಅದು ಪ್ರತಿಯಾಗಿ ಕೇವಲ ಸುಳ್ಳುಗಳನ್ನು ಮತ್ತು ಮೋಸವನ್ನೇ ನೀಡುತ್ತಿದೆ ಎಂದು ತರಾಟೆಗೆತ್ತಿಕೊಂಡಿದ್ದರು.

ಅಮೆರಿಕದ ಹಿತಾಸಕ್ತಿಗಳು ಮತ್ತು ಸಿಬ್ಬಂದಿಗಳಿಗೆ ಬೆದರಿಕೆಯನ್ನೊಡ್ಡುತ್ತಿರುವ ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ಆಶ್ರಯ ಮತ್ತು ಬೆಂಬಲ ಮುಂದುವರಿದಿದೆ. ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ತಾಲಿಬಾನ್ ಮತ್ತು ಹಕ್ಕಾನಿ ಗುಂಪಿನ ನಾಯಕರನ್ನು ಮತ್ತು ಸದಸ್ಯರನ್ನು ಪಾಕಿಸ್ತಾನವು ತೆರವುಗೊಳಿಸುತ್ತಿದೆ ಅಥವಾ ಬಂಧಿಸುತ್ತಿದೆ ಎನ್ನುವುದಕ್ಕೆ ಯಾವುದೇ ದೃಢವಾದ ಪುರಾವೆ ದೊರಕಿಲ್ಲ ಎಂದೂ ಹೇಳಿಕೆಯು ತಿಳಿಸಿದೆ.

ಅಮೆರಿಕವು ಬಯಸಿರುವ ನಿರ್ದಿಷ್ಟ ಕ್ರಮಗಳನ್ನು ಕೈಗೊಂಡ ಬಳಿಕವಷ್ಟೇ ಪಾಕಿಸ್ಥಾನವು ಈಗ ಸ್ಥಗಿತಗೊಳಿಸಿರುವ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು ಮತ್ತು ಈ ಕ್ರಮ ಗಳನ್ನು ಆ ರಾಷ್ಟ್ರದ ನಾಯಕರಿಗೆ ಖಾಸಗಿಯಾಗಿ ತಿಳಿಸಲಾಗಿದೆ ಎಂದೂ ವಿದೇಶಾಂಗ ಇಲಾಖೆಯು ಹೇಳಿದೆ.

ಆದರೆ, ಕಾನೂನಿನಡಿ ಕಡ್ಡಾಯವಾಗಿರುವ ಮತ್ತು ಈಗಾಗಲೇ ಜಾರಿಯಲ್ಲಿರುವ ಆರ್ಥಿಕ ನೆರವುಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದರು.

ಭದ್ರತಾ ನೆರವು ಸ್ಥಗಿತಗೊಳಿಸುವ ನಿರ್ಧಾರದ ಹಿಂದೆ ಸಮಗ್ರ ಚಿಂತನೆ ಇದ್ದಂತಿಲ್ಲ. ಉದಾಹರಣೆಗೆ ವಾರ್ಷಿಕ ಐದು ಮಿ.ಡಾ.ಗಳ, ಅಂತರರಾಷ್ಟ್ರೀಯ ಮಿಲಿಟರಿ ಶಿಕ್ಷಣ ಮತ್ತು ತರಬೇತಿಯಂತಹ ಇತರ ಶೀರ್ಷಿಕೆಗಳಡಿ ನೀಡಲಾಗುವ ನೆರವು ಟ್ರಂಪ್ ಅವರ ನಿರ್ಧಾರದಲ್ಲಿ ಏಕೆ ಸೇರಿಲ್ಲ ಎಂದು ಟೀಕಾಕಾರರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News