ಅಮಾಯಕರ ಕೊಲೆ, ಹಲ್ಲೆ ಖಂಡನೀಯ: ಸಂಯಮದಿಂದ ವರ್ತಿಸಿ-ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್ ಕರೆ

Update: 2018-01-07 07:41 GMT

ಮಂಗಳೂರು, ಜ.5: ಕರಾವಳಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮುದ್ವೇಷದ ಘಟನೆಗಳು ಇಲ್ಲಿನ ಸಂಸ್ಕೃತಿಗೆ ಮಾರಕವಾಗಿದೆ. ಕರಾವಳಿಯಲ್ಲಿ ಈ ಪರಿಸ್ಥಿತಿ ಇಷ್ಟೊಂದು ಅಪಾಯಕಾರಿ ಮಟ್ಟಕ್ಕೆ ತಲುಪಿರುವುದನ್ನು ನನಗೆ ಊಹಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಸಾಕಷ್ಟು ಬುದ್ಧಿಜೀವಿಗಳು, ವಿದ್ಯಾವಂತರು, ವಿಚಾರವಂತ ಇದ್ದರೂ ಇಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಆಘಾತಕಾರಿಯಾಗಿದೆ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ  ಬಿ.ಎ. ಮೊಹಿದಿನ್ ತಿಳಿಸಿದರು.

ಅವರು ಕಾಟಿಪಳ್ಳದ ದೀಪಕ್ ರಾವ್ ಕೊಲೆ ಪ್ರಕರಣ ಮತ್ತು ಬಶೀರ್‌ ಅವರ ಮೇಲೆ ನಡೆದ ಮಾರಣಾಂತಿಕ, ಬರ್ಬರ ಹಲ್ಲೆ ಪ್ರಕರಣವನ್ನು ಖಂಡಿಸಿದ್ದಾರೆ.

ಇಂತಹ ಕೋಮುದ್ವೇಷದ ಘಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಮೌನವಹಿಸದೆ ದುಷ್ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಯಾವುದೇ ವ್ಯಕ್ತಿಯ ಕೊಲೆ ನಡೆದಾಗ ಒಂದು ಧರ್ಮದವರು ಇನ್ನೊಂದು ಧರ್ಮದವರ ವಿರುದ್ಧ ದ್ವೇಷ ಸಾಧನೆ ಇಳಿಯದೆ ಸಂಯಮದಿಂದ ವರ್ತಿಸಿ ಆರೋಪಿಗಳನ್ನು ಹಿಡಿಯಲು ಸಹಕರಿಸಬೇಕು. ಈ ರೀತಿಯ ದುಷ್ಕೃತ್ಯಗಳನ್ನು ನಡೆಸುವುದರ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಕೂಲಂಕಷವಾಗಿ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಇಂದಿನ ಕೆಲವು ರಾಜಕಾರಣಿಗಳ ಹೇಳಿಕೆಗಳನ್ನು ಗಮನಿಸಿದಾಗ ತಾಳ್ಮೆಯಿಂದ ಘಟನೆಯ ಬಗ್ಗೆ ವಿವೇಚನೆ ಮಾಡದೆ ಸಮಾಜದಲ್ಲಿ ಶಾಂತಿ ಕಾಪಾಡಲು ಯತ್ನಿಸುವ ಬಗ್ಗೆ ಯೋಚನೆ ಮಾಡದೆ ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸುವ ಕೆಟ್ಟ ಪ್ರವೃತ್ತಿಯ ರಾಜಕೀಯ ಬೆಳೆಯುತ್ತಿದೆ ಎಂದು ಭಾಸವಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಒಂದು ಧರ್ಮದ ಜನರು, ಇನ್ನೊಂದು ಜನಾಂಗವನ್ನು ವಿರೋಧಿಸುವ ಪ್ರವೃತ್ತಿ ಬೆಳೆದಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಹೊಟ್ಟೆಪಾಡಿಗಾಗಿ ಯಾರಿಗೂ ತೊಂದರೆ ಮಾಡದೆ ತನ್ನ ವೃತ್ತಿಯನ್ನು ತನ್ನಷ್ಟಕ್ಕೆ ಮಾಡಿಕೊಂಡಿರುವ ಅಮಾಯಕ ವ್ಯಕ್ತಿಗಳನ್ನು ಬರ್ಬರವಾಗಿ ಕೊಲೆ ಮಾಡುವ ಮತ್ತು ಅವರ ಮೇಲೆ ಹಲ್ಲೆ ನಡೆಸುವ ಅಮಾನುಷ ಪ್ರವೃತ್ತಿ ಖಂಡನೀಯ. ಈ ರೀತಿ ಹಿಂಸೆಯ ಮೂಲಕ ಧರ್ಮಕ್ಕೆ ಅಪಮಾನವಾಗುವ ಕೆಲಸವನ್ನು ಮಾಡಿ ಧರ್ಮವನ್ನು ಅಪವಿತ್ರಗೊಳಿಸುವ ಕೆಲಸಕ್ಕೆ ಯಾರೂ ಇಳಿಯಬಾರದು. ಹಿಂಸಾಕೃತ್ಯದಲ್ಲಿ ತೊಡಗುವ ಕೋಮುವಾದಿಗಳಿಗೆ ಯಾವ ಧರ್ಮದವರೂ ಬೆಂಬಲ ನೀಡಬಾರದು. ಜಿಲ್ಲೆಯಲ್ಲಿ ಶಾಂತಿಕಾಪಾಡಲು ಎಲ್ಲರೂ ಸಂಯಮದಿಂದ ವರ್ತಿಸಬೇಕು ಎಂದು ಬಿ.ಎ.ಮೊಹಿದಿನ್ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News