×
Ad

ಅಮಾರ್ತ್ಯ ಸೇನ್ ಕುರಿತ ಸಾಕ್ಷ್ಯಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಹಸಿರು ನಿಶಾನೆ

Update: 2018-01-05 22:12 IST

ಕೊಲ್ಕತ್ತಾ, ಜ.5: ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಅಮಾರ್ತ್ಯ ಸೇನ್ ಅವರ ಬಗ್ಗೆ ತಾನು ನಿರ್ದೇಶಿಸಿರುವ ಸಾಕ್ಷಚಿತ್ರ ‘ಆರ್ಗ್ಯುಮೆಂಟೇಟಿವ್ ಇಂಡಿಯನ್‌’ ಅನ್ನು ಯಥಾವತ್ ರೂಪದಲ್ಲಿ, ತೆಗೆಯದೆಯೇ ಬಿಡುಗಡೆ ಮಾಡಲು ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿರುವುದಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸುಮನ್ ಘೋಶ್ ಶುಕ್ರವಾರದಂದು ತಿಳಿಸಿದ್ದಾರೆ.

ಒಂದು ಗಂಟೆ ಅವಧಿಯ ಸಾಕ್ಷ್ಯಚಿತ್ರದಲ್ಲಿ ಗೋವು, ಗುಜರಾತ್, ಹಿಂದುತ್ವ ಮತ್ತು ಹಿಂದೂ ಎಂಬ ನಾಲ್ಕು ಶಬ್ದಗಳನ್ನು ತೆಗೆದುಹಾಕಬೇಕು ಎಂಬ ಕೊಲ್ಕತ್ತಾ ಸಿಬಿಎಫ್‌ಸಿ (ಸೆನ್ಸಾರ್ ಮಂಡಳಿ)ಯ ಸೂಚನೆಯನ್ನು ನಿರ್ದೇಶಕರು ನಿರಾಕರಿಸಿದ ಕಾರಣ ಕಳೆದ ವರ್ಷ ಈ ಸಾಕ್ಷ್ಯಚಿತ್ರವು ವಿವಾದವನ್ನು ಹುಟ್ಟುಹಾಕಿತ್ತು. ಗುರುವಾರದಂದು ಮುಂಬೈಯಲ್ಲಿ ಮಂಡಳಿಯ ಇತರ ಸದಸ್ಯರೊಂದಿಗೆ ಮುಂಬೈಯಲ್ಲಿ ತನ್ನ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ ಪ್ರಸೂನ್ ಜೋಶಿ ನಂತರ ಅದನ್ನು ಯಥಾವತ್ ಬಿಡುಗಡೆ ಮಾಡಲು ಒಪ್ಪಿಗೆ ನೀಡಿರುವುದಾಗಿ ಘೋಶ್ ತಿಳಿಸಿದ್ದಾರೆ.

2002 ಮತ್ತು 2017ರಲ್ಲಿ ಎರಡು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿರುವ ಈ ಸಾಕ್ಷಚಿತ್ರದಲ್ಲಿ ಸೇನ್ ಸಾಮಾಜಿಕ ಆಯ್ಕೆ ಸಿದ್ಧಾಂತ, ಅಭಿವೃದ್ಧಿ ಆರ್ಥಿಕತೆ, ತತ್ವಶಾಸ್ತ್ರ ಮತ್ತು ಜಗತ್ತಿನಾದ್ಯಂತ ಬಲಪಂಥೀಯ ರಾಷ್ಟ್ರವಾದದ ಹುಟ್ಟಿನ ಬಗ್ಗೆ ಮಾತನಾಡುತ್ತಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಕಲೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಿಬಿಎಫ್‌ಸಿ ಗೌರವಿಸುತ್ತದೆ ಎಂಬುದನ್ನರಿತು ನನಗೆ ಸಂತೋಷವಾಯಿತು. ನನ್ನ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ ಅಮಾರ್ತ್ಯ ಸೇನ್ ಬಗ್ಗೆ ಮತ್ತಷ್ಟು ತಿಳಿದಿರುವುದಾಗಿ ಜೋಶಿ ನನಗೆ ತಿಳಿಸಿದರು ಎಂದು ಘೋಶ್ ಹೇಳಿಕೊಂಡಿದ್ದಾರೆ.

ಈ ವಿಷಯವನ್ನು ಮಂಡಳಿಯ ಮುಖ್ಯಸ್ಥರು ನಿಭಾಯಿಸುತ್ತಿರುವುದರಿಂದ ಮಂಡಳಿಯ ಪ್ರಾದೇಶಿಕ ಕಚೇರಿ ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ಸಿಬಿಎಫ್‌ಸಿಯ ಕೊಲ್ಕತ್ತಾ ವಿಭಾಗದ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News