ಕಾಪು: ಜ.8ರಂದು ಮುಖ್ಯಮಂತ್ರಿಯಿಂದ 445ಕೋಟಿ ರೂ. ಕಾಮಗಾರಿಗೆ ಚಾಲನೆ
ಕಾಪು, ಜ. 5: ಕಾಪು ಕ್ಷೇತ್ರದಲ್ಲಿ 445 ಕೋಟಿ ರೂ. ವೆಚ್ಚದ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 8ರಂದು ನೆರವೇರಿಸಲಿರುವರು ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಶುಕ್ರವಾರ ಕಾಪುವಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗಳು ವಿವಿಧ ಕ್ಷೇತ್ರಗಳ ಕಾರ್ಯಕ್ರಮ ಮುಗಿಸಿವ ಸಂಜೆ 4 ಗಂಟೆಗೆ ಕಾಪುವಿಗೆ ಆಗಮಿಸುವ ಮುಖ್ಯಮಂತ್ರಿಗಳು ಕಾಪು ಪೇಟೆಯಲ್ಲಿ ನಡೆಯುವ ಸಾರ್ವಜನಿಕ ಸಮಾರಂಭ ನಡೆಯಲಿದೆ.
ಸುಮಾರು 10 ಸಾವಿರ ಜನ ಫಲಾನುಭವಿಗಳಿಗೆ ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ವಿತರಿಸಲಾಗುವುದು. ಅಲ್ಲದೆ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷದ ವತಿಯಿಂದ ಮಾಡಲಾಗಿದ್ದು, ಸಹಕಾರಿ, ಸ್ತ್ರೀ ಶಕ್ತಿ, ಸ್ವಸಹಾಯ ಗುಂಪುಗಳಿಂದ 10 ಸಾವಿರ ಜನ ಸಮಾರಂಭ ದಲ್ಲಿ ಪಾಲ್ಗೊಳ್ಳುವರು. ಶಾಸಕನಾಗಿ ಕಳೆದ ನಾಲ್ಕೂವರೆ ವರ್ಷದಲ್ಲಿ ಕಾಪು ಕ್ಷೇತ್ರಕ್ಕೆ ಸುಮಾರು 1,700 ಕೋಟಿ ಅನುದಾನವನ್ನು ತರಲಾಗಿದೆ. ಮುಖ್ಯಮಂತ್ರಿಯವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಹೆಜಮಾಡಿ ಬಂದರು, ಮಿನಿ ವಿಧಾನಸೌಧ ಹಾಗೂ ನದಿಗಳ ಹೂಳೆತ್ತುವ ಯೋಜನೆಗಳು ಸಹಿತ ಕಾಪು ಕ್ಷೇತ್ರದ ಹಲವು ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಭೇಟಿಯ ವೇಳೆ ಬೇಡಿಕೆ ಸಲ್ಲಿಸಲಾಗುವುದು ಎಂದು ಸೊರಕೆ ಹೇಳಿದರು.
ಬಂಗ್ಲೆ ಮೈದಾನ ಬಳಿ ರೂ. 5 ಕೋಟಿ ವೆಚ್ಚದ ಕಾಪು ಪುರಸಭೆಯ ನೂತನ ಕಟ್ಟಡದ ಉದ್ಘಾಟನೆ. ಕಾಪು ಪುರಸಭೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಮಣಿಪುರದಿಂದ ನೀರು ಪೂರೈಸುವ ರೂ. 61 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ, ರೂ. 400 ಕೋಟಿ ವೆಚ್ಚದಲ್ಲಿ ಬೆಳಪುವಿನಲ್ಲಿ ನಿರ್ಮಾಣವಾಗುವ ವಿಜ್ಞಾನ ಸಂಶೋಧನಾ ಕೇಂದ್ರದ ಕಾಮಗಾರಿಗೆ ಚಾಲನೆ, ರೂ. 10 ಕೋಟಿ ವೆಚ್ಚದ ಕೈಗಾರಿಕಾ ವಲಯ, ಸರ್ಕಾರಿ ಪಾಲಿಟೆಕ್ನಿಕ್, ಎಲ್ಲೂರಿನಲ್ಲಿ ನಿರ್ಮಾಣವಾಗಲಿರುವ ಕಾಪು ಪುರಸಭೆಯ ಘನತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಪುರಸಭಾ ವ್ಯಾಪ್ತಿಯ ಕೊಳಚೆ ನೀರಿನ ಶುಧ್ಧೀಕರಣ ಘಟಕ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು.
ಕಾಪು ತಾಲ್ಲೂಕು ಘೋಷಣೆಯ ನೋಟಿಫಿಕೇಶನ್ ಜನವರಿ 7 ರಂದು ಅಂತಿಮವಾಗಲಿದೆ. ಬಳಿಕ ಅಹವಾಲು ಸ್ವೀಕಾರ ನಡೆಯಲಿದೆ. ಕಾಪು ಕ್ಷೇತ್ರದ 30 ಗ್ರಾಮಗಳನ್ನು ಸೇರಿಸಿಕೊಂಡು ತಾಲೂಕು ರಚನೆಯಾಗಲಿದೆ. ತಾಲೂಕು ರಚನೆ ಜೊತೆಗೆ ಜನರ ಅನುಕೂಲಕ್ಕಾಗಿ ಶಿರ್ವ, ಪಡುಬಿದ್ರಿಯಲ್ಲಿ ನಾಡ ಕಚೇರಿ ತೆರೆಯಲಾಗುವುದು.
ಕಾಪು ನಗರಾಭಿವೃದ್ಧಿ ಪ್ರಾಧಿಕಾರದ ಬಗ್ಗೆ ಸಾರ್ವಜನಿಕರಿಗೆ ಗೊಂದಲಗಳಿವೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕಾಪು ಪುರಸಭೆ, ಪ್ರಾಧಿಕಾರ ಹಾಗೂ ಸಾರ್ವಜನಿಕರನ್ನು ಸೇರಿಸಿ ಸಭೆಯೊಂದನ್ನು ನಡೆಸಲು ತೀರ್ಮಾಣಿಸಲಾಗಿದೆ. ನಗರವನ್ನು ಸುವ್ಯವಸ್ಥಿತಿ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಾಧಿಕಾರವನ್ನು ಆರಂಭಿಸಲಾಗಿದೆ. ಆರಂಭದಲ್ಲಿ ಪ್ರಾಧಿಕಾರದಿಂದ ಸಮಸ್ಯೆಗಳಾಗಿವೆ. ಈ ಸಮಸ್ಯೆಯನ್ನು ನಿವಾರಿಸಲಾಗಿದೆ. ಆದರೂ ಸಾರ್ವಜನಿಕರಲ್ಲಿ ಗೊಂದಲಗಳಿವೆ ಎಂದು ಸೊರಕೆ ಪ್ರಾಧಿಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಪಷ್ಟಪಡಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಪ್ರಚಾರ ಸಮಿತಿ ಸದಸ್ಯ ದಿನೇಶ್ ಪುತ್ರನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಜಿಪಂ ಮಾಜಿ ಅಧ್ಯಕ್ಷೆ ಸರಸು ಬಂಗೇರ, ಕಾಪು ಬ್ಲಾಕ್ ದಕ್ಷಿಣ ಅಧ್ಯಕ್ಷ ನವೀನ್‌ಚಂದ್ರ ಜೆ ಶೆಟ್ಟಿ, ಉತ್ತರ ಅಧ್ಯಕ್ಷ ಸುಧೀರ್ ಹೆಗ್ಡೆ, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪುರಸಭಾ ಅಧ್ಯಕ್ಷೆ ಸೌಮ್ಯಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು, ವಿನಯ ಬಲ್ಲಾಳ್ ಇದ್ದರು.
ವಿರೋಧ ಸರಿಯಲ್ಲ: ಎಲ್ಲೂರಿನಲ್ಲಿ ನಿರ್ಮಾಣವಾಗಲಿರುವ ಕಾಪು ಪುರಸಭೆಯ ಘನತ್ಯಾಜ್ಯ ಸಂಸ್ಕರಣಾ ಘಟಕ ವೈಜ್ಞಾನಿವಾಗಿ ನಡೆಸಲಾಗುವುದು. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಘಟಕ ವಿರೋಧಿಸುವವರು ಯುಪಿಸಿಎಲ್‌ನಿಂದಾಗುವ ಸಮಸ್ಯೆ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಹೇಳಿದ ಸೊರಕೆ, ಜಿಲ್ಲಾಡಳಿತದಿಂದ ಈ ಯೋಜನೆಗೆ ಸ್ಥಳ ಗುರುತಿಸುವಿಕೆಗೆ ತಿಳಿಸಲಾಗಿತ್ತು. ಜಿಲ್ಲಾಡಳಿತ ಎಲ್ಲೂರಿನ ಜಾಗವನ್ನು ಗುರುತಿಸಿದೆ. ಜಾಗ ಗುರುತಿಸುವುದರಲ್ಲಿ ನನ್ನ ಪಾತ್ರವಿಲ್ಲ. ಈಗಾಗಲೇ ಈ ಯೋಜನೆಗೆ ಪರಿಸರ ಇಲಾಖೆ ಅನುಮಾತಿ ನೀಡಿದೆ ಎಂದರು.