ದೇಶಕ್ಕಾಗಿ ಹೋರಾಡುತ್ತಾ ಸಾಯಲು ಅಂಜದಿರಿ: ಚೀನಾ ಸೈನಿಕರಿಗೆ ಅಧ್ಯಕ್ಷ ಜಿನ್‌ಪಿಂಗ್ ಕರೆ
Update: 2018-01-05 23:16 IST
ಶಾಂಘೈ (ಚೀನಾ), ಜ. 5: ಯುದ್ಧಕ್ಕೆ ಸಿದ್ಧವಾಗಿರಿ ಹಾಗೂ ದೇಶದ ರಕ್ಷಣೆಗಾಗಿ ಹೋರಾಡುತ್ತಾ ಸಾಯಲು ಭಯಪಡದಿರಿ ಎಂಬ ಕಠಿಣ ಕರೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತನ್ನ ಸೇನೆಗೆ ನೀಡಿದ್ದಾರೆ.
ಇದು ದೇಶದ ಸಮಗ್ರ ಸೇನೆಯನ್ನು ಉದ್ದೇಶಿಸಿ ಚೀನಾದ ಅಧ್ಯಕ್ಷರು ಮಾಡಿದ ಅಪರೂಪದ ಭಾಷಣವಾಗಿದೆ ಎಂದು ಸರಕಾರಿ ಮಾಧ್ಯಮಗಳು ಬಣ್ಣಿಸಿವೆ.
ಚೀನಾ ಜಗತ್ತಿನ ಅತಿ ದೊಡ್ಡ ಸೇನೆಯನ್ನು ಹೊಂದಿದೆ.
‘‘ಚೀನಾದ ಸೇನಾ ಸಿಬ್ಬಂದಿ ಕಷ್ಟಕ್ಕಾಗಲಿ, ಸಾವಿಗಾಗಲಿ ಎದೆಗುಂದಬಾರದು’’ ಎಂದು ಉತ್ತರದ ಹೆಬೈ ಪ್ರಾಂತದಲ್ಲಿರುವ ಪೀಪಲ್ಸ್ ಲಿಬರೇಶನ್ ಆರ್ಮಿಯ ಸೆಂಟ್ರಲ್ ತಿಯೇಟರ್ ಕಮಾಂಡ್‌ಗೆ ಬುಧವಾರ ನೀಡಿದ ತಪಾಸಣಾ ಭೇಟಿಯ ವೇಳೆ ಸಾವಿರಾರು ಸೈನಿಕರನ್ನು ಉದ್ದೇಶಿಸಿ ಜಿನ್‌ಪಿಂಗ್ ಭಾಷಣ ಮಾಡಿದರು ಎಂದು ಅಧಿಕೃತ ಸುದ್ದಿಸಂಸ್ಥೆ ಕ್ಸಿನುವಾ ವರದಿ ಮಾಡಿದೆ.