×
Ad

ಬಾಡಿಗೆ ನೆಪದಲ್ಲಿ ವಾಹನ ಪಡೆದು ವಂಚನೆ: ಓರ್ವ ಸೆರೆ

Update: 2018-01-05 23:32 IST

ಪುತ್ತೂರು, ಜ. 5: ಬಾಡಿಗೆ ನೆಪದಲ್ಲಿ ಪಡೆದ ವಾಹನವನ್ನು ಹಣಕ್ಕಾಗಿ ಗಿರವಿಟ್ಟು ನಾಪತ್ತೆಯಾದ ಅಂತಾರಾಜ್ಯ ವಂಚನಾ ಪ್ರಕರಣವೊಂದನ್ನು ಬೇಧಿಸಿರುವ ಪುತ್ತೂರು ನಗರ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಕುಕ್ಕರಬೆಟ್ಟು ನಿವಾಸಿ  ಸಂಶುದ್ದೀನ್(42) ಮತ್ತು ಉಡುಪಿ ಕೋಟೇಶ್ವರದ ಮಹಮ್ಮದ್ ಹನೀಫ್(42) ಪ್ರಕರಣದ ಆರೋಪಿಗಳಾಗಿದ್ದು, ಈ ಪೈಕಿ ಸಂಶುದ್ದೀನ್ ಎಂಬಾತನನ್ನು ಪುತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಶುದ್ದೀನ್ ಮತ್ತು ಮಹಮ್ಮದ್ ಹನೀಫ್ ಪುತ್ತೂರಿನ ಪಡೀಲು ಶ್ರೀ ಚಾಮುಂಡೇಶ್ವರಿ ಮೋಟಾರ್ ವರ್ಕ್ಸ್‌ನ ಮಾಲಕ ಅಶೋಕ್ ಅವರಿಂದ ನ. 21ರಂದು ಇನ್ನೋವಾ ಮತ್ತು ಮಾರುತಿ ಸ್ವಿಪ್ಟ್ ಕಾರನ್ನು 20 ದಿನದ ಅವಧಿಗೆ ಬಾಡಿಗೆಗೆ ಪಡೆದುಕೊಂಡಿದ್ದರು. 20 ದಿನದ ಬಳಿಕವೂ ಆರೋಪಿಗಳು ವಾಹನಗಳನ್ನು ಹಿಂತಿರುಗಿಸದ ಹಿನ್ನೆಲೆಯಲ್ಲಿ ಅಶೋಕ್ ಅವರು ಮೊಬೈಲ್ ಮೂಲಕ ಅವರನ್ನು ಸಂಪರ್ಕಿಸಿದಾಗ ಇನ್ನೂ ಒಂದು ವಾರ ಬಾಡಿಗೆಗೆ ಬೇಕಾಗಿದ್ದು, ವಾರದ ಬಳಿಕ ಹಿತಿರುಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ವಾರದ ಬಳಿಕವೂ ಕಾರು ಮತ್ತು ಚಾಲಕರು ನಾಪತ್ತೆಯಾಗಿದ್ದ ಕಾರಣ ಅಶೋಕ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.

ನಂಬಿಕೆ ದ್ರೋಹ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಬೊಮ್ಮನ ಹಳ್ಳಿಯ ಸಮೀಪ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಬಾಡಿಗೆಗೆ ಗೊತ್ತು ಪಡಿಸಿ ಪಡೆದುಕೊಂಡಿದ್ದ ಎರಡೂ ಕಾರುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಡಿವೈಎಸ್ಪಿ ಶ್ರೀನಿವಾಸ್ ಮತ್ತು ಪುತ್ತೂರು ನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕ್ರೈಂ ಎಸ್.ಐ ಚೆಲುವಯ್ಯ, ಹೆಡ್‌ಕಾನ್‌ಸ್ಟೇಬಲ್ ದಾಮೋದರ, ಸಿಬ್ಬಂದಿ ಮಂಜು, ಪ್ರಸನ್ನ, ರಾಜುಪೂಜಾರಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಿದ್ದರು.

ಚಾಣಕ್ಯ ವಂಚಕರು

ವಾಹನಗಳನ್ನು ಬಾಡಿಗೆಗೆ ಪಡೆದು ಬಡ್ಡಿಗೆ ಹಣ ನೀಡುವವರಲ್ಲಿ ಗಿರವಿರಿಸಿ ಹಣ ಪಡೆದು ವಾಹನ ಮಾಲಕರಿಗೆ ವಂಚಿಸುತ್ತಿದ್ದ ಸಂಶುದ್ದೀನ್ ಮತ್ತು ಮಹಮ್ಮದ್ ಹನೀಫ್ ವಂಚನೆ ಎಸಗಿರುವುದು ಇದೇ ಮೊದಲಲ್ಲ .ಈ ಆರೋಪಿಗಳಿಬ್ಬರು 25ಕ್ಕೂ ಹೆಚ್ಚು ಮಂದಿಗೆ ವಾಹನ ಪಡೆದು ವಂಚನೆ ಮಾಡಿದ್ದಾರೆಂಬ ವಿಚಾರ ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಈ ವಿಚಾರವನ್ನು ಆರೋಪಿಗಳೇ ತನಿಖೆಯ ವೇಳೆ ಒಪ್ಪಿಕೊಂಡಿದ್ದಾರೆ. ಆದರೆ ಯಾರೂ ಈತನಕ ದೂರು ನೀಡಿರಲಿಲ್ಲ. ಆರೋಪಿಗಳ ವಿರುದ್ಧ ಕಳವು ಆರೋಪಗಳೂ ಇದೆ ಎಂಬ ಮಾಹಿತಿ ಇದೀಗ ಆರೋಪಿಗಳ ಬಂಧನದ ಬಳಿಕ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News