×
Ad

ಕಲ್ಮಾಡಿ: ಹಡಗಿನ ಮಾದರಿಯ ಸ್ಟೆಲ್ಲಾ ಮಾರಿಸ್ ಚರ್ಚ್ ಲೋಕಾರ್ಪಣೆ

Update: 2018-01-06 16:36 IST

ಉಡುಪಿ, ಜ. 6: ಮಲ್ಪೆಸಮೀಪದ ಕಲ್ಮಾಡಿಯಲ್ಲಿ ರಾಜ್ಯ ಪ್ರಥಮ ಹಡಗಿನ ಮಾದರಿಯ ಸ್ಟೆಲ್ಲಾ ಮಾರಿಸ್ ಚರ್ಚನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾ ಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಶನಿವಾರ ಉದ್ಘಾಟಿಸಿದರು.

ಗುಲ್ಬರ್ಗಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ರೋಬರ್ಟ್ ಮಿರಾಂದಾ ನೂತನ ಗಂಟಾ ಗೋಪುರವನ್ನು ಮತ್ತು ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಫ್ರಾನ್ಸಿಸ್ ಸೆರಾವೊ ಪವಾಡ ಮಾತೆ ವೆಲಂಕಣಿ ಮೂರ್ತಿಯನ್ನು ಉದ್ಘಾಟಿಸಿದರು.

ಬಳಿಕ ಪವಿತ್ರ ಜಲ ಪ್ರೊಕ್ಷಣೆಯ ಮೂಲಕ ಚರ್ಚನ್ನು ಶುದ್ದಿಕರಿಸಲಾಯಿತು. ಉಡುಪಿ ಧರ್ಮಾಧ್ಯಕ್ಷರು ಬಲಿಪೂಜೆಯ ಬಲಿಪೀಠವನ್ನು ಪವಿತ್ರ ಎಣ್ಣೆಯಿಂದ ಶುದ್ದಿಕರೀಸಿ ಬಲಿಪೂಜೆಯನ್ನು ಅರ್ಪಿಸಿದರು. ಗುಲ್ಬರ್ಗಾ ಧರ್ಮಾಧ್ಯಕ್ಷ ಪರಮ ಪ್ರಸಾದವನ್ನು ಇಡುವ ಪವಿತ್ರ ಪೆಟ್ಟಿಗೆಯನ್ನು ಆಶೀರ್ವದಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಧರ್ಮಾಧ್ಯಕ್ಷ, ದೇವಾಲಯಗಳು ದೇವರ ಅಸ್ತಿತ್ವವನ್ನು ತೋರ್ಪಡಿ ಸುವ ಸ್ಥಳವಾಗಿದೆ. ಚರ್ಚ್‌ಗಳು ಸ್ವರ್ಗದ ಬಾಗಿಲುಗಳಾಗಿವೆ. ದೇವಾಲಯಗಳು ಮನುಷ್ಯ ಮತ್ತು ದೇವರ ನಡುವೆ ಸಂಬಂಧವನ್ನು ಬೆಸೆಯುವ ಕೊಂಡಿಗಳಾಗಿವೆ ಎಂದು ಹೇಳಿದರು.

ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಉಡುಪಿ ಕೃಷ್ಣ ಮಠಕ್ಕೂ ಮಲ್ಪೆಗೂ ಅವಿನಾಭಾವ ಸಂಬಂಧವಿದ್ದು ಮಲ್ಪೆಯ ಕಡಲಿನಲ್ಲಿ ಕೃಷ್ಣನ ಮೂರ್ತಿ ಸಿಕ್ಕ ಪ್ರತೀತಿ ಒಂದು ಕಡೆಯಾದರೆ, ದೇಶದ ಅತ್ಯುನ್ನತ ಮಲ್ಪೆ ಮೀನುಗಾರಿಕೆ ಬಂದರಿನ ಸಮೀಪ ಕಲ್ಮಾಡಿಯಲ್ಲಿ ಹಡಗಿನ ಆಕೃತಿಯ ಚರ್ಚಿನ ನಿರ್ಮಾಣ ಆಗಿರುವುದು ದಾಖಲೆಯಾಗಿದೆ. ಮುಂದಿನ ದಿನಗಳಲ್ಲಿ ಈ ಚರ್ಚು ಮೀನುಗಾರರ ಚರ್ಚಾಗಿ ಹೆಸರು ಪಡೆಯಲಿ ಎಂದು ಶುಭಹಾರೈಸಿದರು.

ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ದೇಶದಲ್ಲಿ ಶೇ.3ರಷ್ಟಿರುವ ಕ್ರೈಸ್ತ ಸಮುದಾಯ ತನ್ನ ಪ್ರಾಮಾಣಿಕತೆ, ಸೇವೆ ಹಾಗೂ ಪ್ರೀತಿಯಿಂದ ಶೇ.97ರಷ್ಟಿರುವ ಇತರ ಸಮುದಾಯದವರಿಗ ಮಾದರಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಚರ್ಚ್ ಅಭಿವೃದ್ಧಿ, ಕಂಪೌಂಡ್ ನಿರ್ಮಾಣ ಹಾಗೂ ಸ್ಮಶಾನಕ್ಕಾಗಿ 175 ಕೋಟಿ ರೂ. ವ್ಯಯ ಮಾಡಿದೆ. ಕಳೆದ ಬಾರಿಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ 2750 ಕೋಟಿ ರೂ. ಅನುದಾನ ಮೀಸಲಿರಿಸಿದೆ ಎಂದರು.

ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಫ್ರಾನ್ಸಿಸ್ ಸೆರಾವೊ, ಗುಲ್ಬರ್ಗಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ.ರೋಬರ್ಟ್ ಮಿರಾಂದಾ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಶುಭ ಹಾರೈಸಿದರು. ಈ ಸಂದರ್ಭ ದಲ್ಲಿ ದಾನಿಗಳನ್ನು, ಕಟ್ಟಡಕ್ಕೆ ನೆರವಾದವರನ್ನು ಸನ್ಮಾನಿಸಲಾಯಿತು. ಚರ್ಚಿನ ಕಟ್ಟಡಕ್ಕಾಗಿ ತನ್ನ ಹೆತ್ತವರು ನೀಡಿದ ಪಾಕೆಟ್ ಮನಿಯನ್ನು ಕೂಡಿಟ್ಟು ದೇಣಿಗೆ ನೀಡಿದ 6 ಮಂದಿ ಮಕ್ಕಳನ್ನು ಸನ್ಮಾನಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ವಂ.ವಲೇರಿಯನ್ ಮೆಂಡೊನ್ಸಾ, ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ಸ್ಥಾಯಿ ಸಮಿತಿ ಅಧ್ಯಕ್ಷ ಹಾರ್ಮಿಸ್ ನೊರೊನ್ಹಾ, ಸದಸ್ಯ ನಾರಾಯಣ ಕುಂದರ್, ಬ್ಲೊಸಂ ಫೆರ್ನಾಂಡಿಸ್, ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ ಉಪಸ್ಥಿತರಿದ್ದರು.

ಕ್ರೈಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಕಳುಹಿಸಿದ ಆಶೀರ್ವಾದದ ಶುಭಾಶಯ ಪತ್ರವನ್ನು ಕಟ್ಟಡ ಸಮಿತಿಯ ಸಂಚಾಲಕ ಲೂಯಿಸ್ ಲೋಬೊ ವಾಚಿಸಿದರು. ಚರ್ಚಿನ ಧರ್ಮಗುರು ವಂ.ಆಲ್ಬನ್ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ಶೋಭಾ ಮೆಂಡೊನ್ಸಾ ವಂದಿಸಿದರು. ರೋನಾಲ್ಡ್ ಒಲಿವೇರಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News