ಕರಾಟೆಯು ಆತ್ಮವಿಶ್ವಾಸ, ಧೈರ್ಯದ ಪ್ರತೀಕ: ಸಚಿವ ಪ್ರಮೋದ್
ಉಡುಪಿ, ಜ.6: ಕೇವಲ ಪುಸ್ತಕ ಮತ್ತು ಪಠ್ಯಗಳಿಂದ ಜೀವನ ಪಾಠ ಕಲಿ ಯಲು ಸಾಧ್ಯವಿಲ್ಲ. ಅಂಕಗಳಿಕೆಯ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮನಸ್ಥಿತಿಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಕರಾಟೆ ಕಲೆ ಆತ್ಮ ವಿಶ್ವಾಸ ಮತ್ತು ಧೈರ್ಯದ ಪ್ರತೀಕ. ಇದರಿಂದ ಮಕ್ಕಳು ಜೀವನದಲ್ಲಿ ಎದುರಾಗುವ ಸಂದಿಗ್ಧ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕುಬುಡೊ ಬುಡೊಕಾನ್ ಕರಾಟೆ ಅಸೊಸಿಯೇಶನ್ ಕರ್ನಾಟಕ ವತಿ ಯಿಂದ ಶನಿವಾರ ದೊಡ್ಡಣಗುಡ್ಡೆಯ ನಗರಸಭಾ ಸಭಾಂಗಣದಲ್ಲಿ ಏರ್ಪಡಿಸ ಲಾದ 12ನೆ ರಾಜ್ಯಮಟ್ಟದ ಕರಾಟೆ ಸ್ಪರ್ಧಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
2020ರ ಒಲಂಪಿಕ್ಸ್‌ನಲ್ಲಿ ಕರಾಟೆ ಕಲೆಗೆ ಆದ್ಯತೆ ಸಿಗಬೇಕು. ಒಲಂಪಿಕ್ಸ್‌ಗೆ ಕರಾಟೆ ಸೇರ್ಪಡೆಯಾದರೆ ಮಾತ್ರ ಸರಕಾರದ ಮಟ್ಟದಲ್ಲಿ ಅದಕ್ಕೆ ಎಲ್ಲಾ ರೀತಿಯ ಪ್ರೊತ್ಸಾಹ ನೀಡಲು ಸಾಧ್ಯ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕರಾಟೆ ಶಿಕ್ಷಣ ಕೊಡುವ ಬಗ್ಗೆ ಆಡಳಿತ ಮಂಡಳಿಗಳು ಚಿಂತನೆ ಮಾಡಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಿರುತೆರೆ ನಟ ಪ್ರದೀಪ್‌ಚಂದ್ರ ಕುತ್ಪಾಡಿ, ನೃತ್ಯಗಾರ್ತಿ ತನುಶ್ರೀ ಪಿತ್ರೋಡಿ, ಕ್ರೀಡಾಪಟು ಕಾವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಕುಬುಡೊ-ಬುಡೋಕಾನ್ ಕಾರಾಟೆ ಸಂಸ್ಥೆಯ ಮುಖ್ಯ ಶಿಕ್ಷಕ ರವಿಕುಮಾರ್ ಉದ್ಯಾವರ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಮಾಜಿ ಜಿಪಂ ಸದಸ್ಯ ದಿವಾಕರ್ ಕುಂದರ್, ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ನಗರಸಭೆ ಸದಸ್ಯ ಆರ್.ಕೆ.ರಮೇಶ್, ಬ್ರಹ್ಮಾವರ ನಿರ್ಮಲ ಹೈಸ್ಕೂಲ್ ಸಂಚಾಲಕ ವಿಕ್ಟರ್ ಫೆರ್ನಾಂಡಿಸ್, ಲಯನ್ಸ್ ಕ್ಲಬ್‌ನ ನಿರುಪಮಾ ಶೆಟ್ಟಿ, ಅಂಬಲಪಾಡಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ ಸಿ.ಬಂಗೇರ, ನಿಡಂಬೂರು ಯುವಕ ಮಂಡಲ ಅಧ್ಯಕ್ಷ ರವೀಂದ್ರ ಕೆ.ಶೆಟ್ಟಿ, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಮಾಜಿ ಕರಾಟೆಪಟು ಸುನಿಲ್ ಸಾಲ್ಯಾನ್, ಗುತ್ತಿಗೆದಾರ ಹರೀಶ್ ಕುಮಾರ್, ಈಶ್ವರ ಕಟೀಲು, ಕಡೆಕಾರು ಗ್ರಾಪಂ ಸದಸ್ಯ ಜತಿನ್ ಕಡೆಕಾರು, ಕರಾಟೆ ಶಿಕ್ಷಕ ಸಂಘದ ಅಧ್ಯಕ್ಷ ರವಿ ಸಾಲ್ಯಾನ್ ಉಪಸ್ಥಿತರಿದ್ದರು.
ರವಿಕುಮಾರ್ ಉದ್ಯಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಸುವರ್ಣ ಬೊಳ್ಜೆ ಕಾರ್ಯಕ್ರಮ ನಿರೂಪಿಸಿದರು.