ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬಿಜೆಪಿ ಬಹಿಷ್ಕಾರ: ಸಂಜೀವ ಮಟಂದೂರು
ಪುತ್ತೂರು, ಜ. 6: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕಡೆ ನಡೆಸಲಿರುವ ರಾಜಕೀಯ ಪ್ರೇರಿತ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ, ಉದ್ಘಾಟನೆ ಕಾರ್ಯಕ್ರಮಗಳನ್ನು ಬಿಜೆಪಿ ಪಕ್ಷ ಬಹಿಷ್ಕರಿಸಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಮತೀಯ ಸಂಘರ್ಷದಿಂದ ನಲುಗುತ್ತಿದ್ದು, ಇದಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ರಾಜ್ಯ ಸರ್ಕಾರವೇ ಕಾರಣ. ಸರ್ಕಾರದ ಮುಸ್ಲಿಂ ತುಷ್ಟೀಕರಣದ ಫಲವಾಗಿ ಹಿಂದೂಗಳ ಮಾರಣಹೋಮ ನಡೆಯುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಮುಖ್ಯಮಂತ್ರಿಗಳು ಅಭಿವೃದ್ಧಿ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ರಾಜಕೀಯ ಪ್ರೇರಿತ ಕಾರ್ಯಕ್ರಮಗಳಿಗೆ ಬಿಜೆಪಿಯ ಜನಪ್ರತಿನಿಧಿಗಳು ಹೋಗುವುದಿಲ್ಲ. ಜಿಲ್ಲಾ ಪಂ. ಅಧ್ಯಕ್ಷರು, ತಾಲ್ಲೂಕು ಪಂ. ಅಧ್ಯಕ್ಷರು ಸೇರಿದಂತೆ ಬಿಜೆಪಿ ಮೂಲಕ ಆಯ್ಕೆಯಾದ ಯಾವುದೇ ಜನಪ್ರತಿನಿದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿಗಳ ಕೊಡುಗೆ ’ಬಿಗ್ ಝೀರೋ’. ಹಿಂದೊಮ್ಮೆ ಪುತ್ತೂರು ತಾಲೂಕಿಗೆ ಬಂದ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ ಪಶು ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ಮಾಡಿದರು. ಮತ್ತೊಮ್ಮೆ ಬಂದವರು ಬಿಜೆಪಿ ಸರ್ಕಾರ ಮಂಜೂರು ಮಾಡಿದ ಮಿನಿ ವಿಧಾನಸೌಧ ಉದ್ಘಾಟಿಸಿದರು ಎಂದು ಲೇವಡಿ ಮಾಡಿದ ಅವರು ಕಡಬ ತಾಲೂಕು ಘೋಷಣೆ ಇನ್ನೂ ಅಧಿಕೃತವಾಗಿಲ್ಲ. ಜಗದೀಶ್ ಶೆಟ್ಟರ್ ಅವರು ಮಾಡಿದ್ದ ಘೋಷಣೆಯನ್ನೇ ಮರುಘೋಷಣೆ ಮಾಡಲಾಗಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಪುತ್ತೂರು ಜಿಲ್ಲೆ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ರೂ. 1,12,000 ಕೋಟಿ ಸಾಲ ಮಾಡಿತ್ತು. ಈಗಿನ ಸರ್ಕಾರ 2,43,000 ಕೋಟಿ ಸಾಲ ಮಾಡಿದೆ. ಸಾಲದ್ದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿದ್ದ ರೂ.1500 ಕೋಟಿಯನ್ನು ಖಜಾನೆಗೆ ಸೇರಿಸಿಕೊಂಡಿದೆ ಎಂದ ಅವರು ಸರ್ಕಾರದ ಬೊಕ್ಕಸ ಖಾಲಿಯಾಗಿದೆಯೇ ಎಂದು ಪ್ರಶ್ನಸಿದರು. ಶವ ಸಂಸ್ಕಾರಕ್ಕೆ ನೀಡಲಾಗುತ್ತಿದ್ದ ರೂ. 5 ಸಾವಿರ ಹಣವನ್ನೂ ಈಗ ನೀಡುತ್ತಿಲ್ಲ. ಸಾಲ ಮನ್ನಾದ ಹಣ ಇನ್ನೂ ಸಹಕಾರಿ ಸಂಘಗಳಿಗೆ ಬಂದಿಲ್ಲ. ಇಷ್ಟೆಲ್ಲ ಇರುವಾಗ ಚುನಾವಣೆಗೆ 3 ತಿಂಗಳಿರುವಾಗ ಕೋಟಿಗಟ್ಟಲೆ ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ಮಾಡುತ್ತಿದ್ದಾರೆ. ಈ ಹಂತದಲ್ಲಿ ವಿತ್ತ ಇಲಾಖೆ ಇದಕ್ಕೆಲ್ಲ ಅನುಮತಿ ಹೇಗೆ ನೀಡುತ್ತದೆ ಎಂದು ಅವರು ಪ್ರಶ್ನಿಸಿದರು.
ಸರ್ಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಶಾಸಕರ ಫೋಟೋ ಹಾಕುವ ಮೂಲಕ ದುರ್ಬಳಕೆ ಮಾಡಿಕೊಳ್ಳಲಾಗಿದೆ. ರವಿವಾರದ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಕಳೆದ ಹತ್ತು ದಿನಗಳಿಂದ ಯಾವ ಅಧಿಕಾರಿಗಳೂ ಕೆಲಸ ಮಾಡುತ್ತಿಲ್ಲ. ಎಲ್ಲರೂ ಮುಖ್ಯ ಮಂತ್ರಿ ಕಾರ್ಯಕ್ರಮಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಉಪಸ್ಥಿತರಿದ್ದರು.