ಮಂಗಳೂರಿನಲ್ಲಿ ಬ್ಯಾರಿ ಭವನಕ್ಕೆ ಅನುದಾನ: ಸಿಎಂ ಭರವಸೆ
ಮಂಗಳೂರು, ಜ. 6: ಮಂಗಳೂರಿನಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಮುಂದಿನ ಬಜೆಟ್‌ನಲ್ಲಿ ಎಂಟು ಕೋಟಿ ರೂ. ಅನುದಾನ ಕಾಯ್ದಿರಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮುಹಮ್ಮದ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದಾಗ ಅವರು ಈ ಭರವಸೆ ನೀಡಿದರು.
ನಿಯೋಗದ ಮನವಿಯಂತೆ ಈಗಾಗಲೇ ಘೋಷಣೆ ಮಾಡಿರುವ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಪೀಠ ಶೀಘ್ರ ಕಾರ್ಯಾರಂಭಕ್ಕೆ ಅನುದಾನ ಬಿಡುಗಡೆ ಮಾಡಿ ಪ್ರಕ್ರಿಯೆ ಆರಂಭಿಸಲು ಕೂಡ ಚಿಂತನೆ ನಡೆಸಲಾಗುವುದು ಎಂದರು.
ಅಕಾಡೆಮಿಗೆ ಸರಕಾರ ನೀಡುತ್ತಿರುವ ವಾರ್ಷಿಕ 60 ಲಕ್ಷ ರೂ. ಅನುದಾನದಲ್ಲಿ ಕಚೇರಿ ಬಾಡಿಗೆ, ವೇತನ ಹಣ ಇತ್ಯಾದಿಗಳಿಗೆ ಹೆಚ್ಚು ಖರ್ಚಾಗುತ್ತಿದೆ. ಭಾಷೆ, ಸಾಹಿತ್ಯ, ಸಂಶೋಧನೆಯ ಕೆಲಸಗಳಿಗಾಗಿ ಅನುದಾನವನ್ನು ಎರಡು ಕೋಟಿ ರೂ.ಗೆ ಹೆಚ್ಚಿಸಬೇಕು ಎಂದು ನಿಯೋಗ ಮನವಿ ಮಾಡಿತು.
ಸಿಎಂಗೆ ಭೇಟಿ ಸಂದರ್ಭದಲ್ಲಿ ಅರಣ್ಯ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್, ಅಕಾಡಮಿ ಸದಸ್ಯರಾದ ಬಶೀರ್ ಬೈಕಂಪಾಡಿ, ಅತ್ತೂರು ಚೆಯ್ಯಬ್ಬ, ಹುಸೈನ್ ಕಾಟಿಪಳ್ಳ ಮತ್ತಿತರರಿದ್ದರು.