ವೆನ್ಲಾಕ್ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ತುರವೇ ಧರಣಿ
ಮಂಗಳೂರು, ಜ.6:ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ ತುಳುನಾಡ ರಕ್ಷಣಾ ವೇದಿಕೆಯು ಶನಿವಾರ ಆಸ್ಪತ್ರೆಯ ಮುಂಭಾಗ ಧರಣಿ ನಡೆಸಿತು.
ಆಸ್ಪತ್ರೆಯ ಹಳೆಯ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯು ಹಲವಾರು ಮೂಲಭೂತ ಸಮಸ್ಯೆ ಹಾಗೂ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ವಿಫಲವಾಗಿದೆ. ಹಲವು ವರ್ಷಗಳಿಂದ ನಗರದ ಖಾಸಗಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಜೊತೆ ಆಸ್ಪತ್ರೆಯ ನಿರ್ವಹಣೆ, ವೈದ್ಯಕೀಯ ಸೇವೆ ಇತ್ಯಾದಿಯಾಗಿ ಒಪ್ಪಂದ ಮಾಡಿಕೊಂಡಿದ್ದರೂ ರೋಗಿಗಳಿಗೆ ಉತ್ತಮ ಸೇವೆ ನೀಡುವಲ್ಲಿ ಜಿಲ್ಲಾಸ್ಪತ್ರೆಯು ವಿಫಲವಾಗಿದೆ ಎಂದು ಧರಣಿ ನಿರತರು ಆಪಾದಿಸಿದರು.
ತುರವೇ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಕೇಂದ್ರೀಯ ಕೋಶಾಧಿಕಾರಿ ಅಬ್ದುರ್ರಶೀದ್ ಜೆಪ್ಪು, ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಿರಾಜ್ ಅಡ್ಕರೆ, ಯುವ ಘಟಕದ ಜಿಲ್ಲಾಧ್ಯಕ್ಷ ಹರೀಶ್ ಶೆಟ್ಟಿ, ಉಡುಪಿ ಜಿಲ್ಲಾಧ್ಯಕ್ಷ ರಮೇಶ್ ಪೂಜಾರಿ ಶೀರೂರು, ಕಾಸರಗೋಡು ಜಿಲ್ಲಾಧ್ಯಕ್ಷ ಭಾಸ್ಕರ್ ಕುಂಬ್ಳೆ, ಗಂಗಾಧರ್ ಅತ್ತಾವರ್, ಶ್ರೀಕಾಂತ್ ಸಾಲಿಯಾನ್, ರೇಶ್ಮಾ ಎಸ್. ಉಳ್ಳಾಲ್, ವಿದ್ಯಾ ಯು. ಜೋಗಿ, ಸುಖಲತಾ ಶೆಟ್ಟಿ, ಪ್ರಸಾದ್ ಕೊಂಚಾಡಿ, ಪ್ರಸಾದ್ ಕುಮಾರ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.