ಕರಾವಳಿ ಉತ್ಸವ: ರಾಷ್ಟ್ರಮಟ್ಟದ ಲಗೋರಿ ಕ್ರೀಡಾಕೂಟ ಉದ್ಘಾಟನೆ
ಮಂಗಳೂರು, ಜ.6: ಪಾಥ್ ವೇ ತಂಡವು ಅಮೆಚೂರ್ ಲಗೋರಿ ಫೆಡರೇಶನ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಆಯೋಜಿಸಿರುವ ರಾಷ್ಟ್ರಮಟ್ಟದ ಲಗೋರಿ ಕ್ರೀಡಾಕೂಟವನ್ನು ಶನಿವಾರ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮೇಯರ್ ಕವಿತಾ ಸನಿಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಗ್ರಾಮೀಣ ಕ್ರೀಡಾಕೂಟಗಳಿಗೆ ಪ್ರೋತ್ಸಾಹ ನೀಡಿ ಮುಖ್ಯವಾಹಿನಿಗೆ ತರುವ ಕಾರ್ಯ ಹೆಚ್ಚು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಮಕ್ಕಳ ಇಂತಹ ಆಟವು ಪ್ರತಿಯೊಬ್ಬರಿಗೂ ತಮ್ಮ ಬಾಲ್ಯವನ್ನು ಮರುಕಳಿಸುವಂತೆ ಮಾಡುತ್ತದೆ. ಲಗೋರಿಯು ಇತ್ತೀಚೆಗೆ ಮರೆಯಾಗುತ್ತಿರುವ ಹಂತದಲ್ಲಿ ಪಾಥ್ ವೇ ತಂಡವು ಅದನ್ನು ಕ್ರೀಡಾಕೂಟವನ್ನಾಗಿ ಆಯೋಜಿಸಿ ಜನರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ. ಕ್ರಿಕೆಟ್ ಮುಂತಾದ ಆಟಗಳಿಗೆ ಸಿಗುವ ಪ್ರೋತ್ಸಾಹ ಗ್ರಾಮೀಣ ಕ್ರೀಡೆಯಾದ ಲಗೋರಿ ಸಹಿತ ಇತರ ಕ್ರೀಡೆಗಳಿಗೂ ಲಭಿಸುವಂತಾಗಬೇಕು ಎಂದು ಕವಿತಾ ಸನಿಲ್ ನುಡಿದರು.
ಕಾರ್ಪೋರೇಟರ್ ಜಯಂತಿ ಮಾತನಾಡಿ, ಲಗೋರಿ ಪಲ್ಲೆಗಳನ್ನು ನೋಡುವಾಗ ಮತ್ತೊಂದು ನಮ್ಮ ಬಾಲ್ಯ ನೆನಪಾಯಿತು. ಗ್ರಾಮೀಣ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಇದರಿಂದ ಮಾನಸಿಕ, ದೈಹಿಕ ಸದೃಢತೆ ಸಾಧ್ಯ ಎಂದರು.
ಮೇಯರ್ ಕವಿತಾ ಸನಿಲ್ ಅವರ ಜತೆ ಲಗೋರಿ ರಾಯಭಾರಿ ಸಂಜನಾ, ನಟಿಯರಾದ ಅಪೇಕ್ಷಾ ಪುರೋಹಿತ್, ನೀತಾ ಮುರಳೀಧರ್ ರಾವ್ ಲಗೋರಿ ಪಲ್ಲೆಗಳಿಗೆ ಚೆಂಡು ಎಸೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಶಾಸಕ ಬಿ.ಎ.ಮೊಯ್ದಿನ್ ಬಾವ, ನಟ ಹಿತೇಶ್ ಕುಮಾರ್ ಕಾಪಿನಡ್ಕ, ಅನೀಶ್ ಅಮೀನ್, ಅಂತಾರಾಷ್ಟ್ರೀಯ ಲಗೋರಿ ರೆಫ್ರಿ ಸಂದೀಪ್ ಗುರೋಲ್, ಪಾಥ್ ವೇ ಸಂಸ್ಥೆ ಮಾಲೀಕ ದೀಪಕ್ ಗಂಗೂಲಿ ಮತ್ತಿತರರು ಉಪಸ್ಥಿತರಿದ್ದರು.
14 ತಂಡಗಳು ಭಾಗಿ
ಕರ್ನಾಟಕ, ಆಂಧ್ರಪ್ರದೇಶ, ಹೊಸದಿಲ್ಲಿ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಾಂಡಿಚೇರಿ, ವಿದರ್ಭ, ತೆಲಂಗಾಣ, ತಮಿಳುನಾಡು, ದಾದರ್ ಮತ್ತು ಹವೇಲಿ, ಛತ್ತೀಸ್‌ಘಡ, ಗೋವಾ ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಪುರುಷರ ವಿಭಾಗದಲ್ಲಿ ಛತ್ತಿಸ್‌ಘಡ ರಾಜ್ಯದ ಎದುರು ಕರ್ನಾಟಕ, ಹೊಸದಿಲ್ಲಿ ಎದುರು ತೆಲಂಗಾಣ, ಹರ್ಯಾಣದ ಎದುರು ಮಹಾರಾಷ್ಟ್ರ, ಮಧ್ಯಪ್ರದೇಶದ ಎದುರು ಆಂಧ್ರಪ್ರದೇಶ, ಛತ್ತೀಸ್‌ಘಢದ ಎದುರು ದಾದರ್ ಮತ್ತು ಹವೇಲಿ ತಂಡ ಜಯಗಳಿಸಿತು.
ಕರ್ನಾಟಕದ ಎದುರು ಹರ್ಯಾಣ, ಹೊಸದಿಲ್ಲಿ ಎದುರು ದಾದರ್ ಹವೇಲಿ, ಆಂಧ್ರಪ್ರದೇಶದ ಎದುರು ತಮಿಳುನಾಡು, ಮಧ್ಯಪ್ರದೇಶದ ಎದುರು ವಿದರ್ಭ, ವೊದರ್ಭದ ಎದುರು ಪಾಂಡಿಚೇರಿ, ಮಧ್ಯಪ್ರದೇಶದ ಎದುರು ಆಂಧ್ರಪ್ರದೇಶದ ತಂಡ ಜಯಗಳಿಸಿದವು.
ಮಹಿಳೆಯರ ವಿಭಾಗದಲ್ಲಿ ಪಾಂಡಿಚೆರಿ ಎದುರು ಕರ್ನಾಟಕ ತಂಡ ಜಯಗಳಿಸಿದೆ.