ಆಧಾರ್ ಕಾರ್ಡ್ ಕಡ್ಡಾಯದಿಂದ ನಕಲಿ ಶಿಕ್ಷಕರು ಪತ್ತೆ

Update: 2018-01-06 15:02 GMT

ಹೊಸದಿಲ್ಲಿ, ಜ.6: ಆಧಾರ್ ನಂಬರ್ ನೀಡುವುದನ್ನು ಕಡ್ಡಾಯಗೊಳಿಸಿರುವ ಕಾರಣ ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 80,000 ನಕಲಿ ಶಿಕ್ಷಕರನ್ನು ಪತ್ತೆಹಚ್ಚಲಾಗಿದೆ ಎಂದು ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ‘ಅಖಿಲ ಭಾರತ ಉನ್ನತ ಶಿಕ್ಷಣ ಕ್ಷೇತ್ರದ ಸಮೀಕ್ಷೆ’ಯ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

ಕಾಲೇಜು ಮತ್ತು ವಿವಿಗಳಲ್ಲಿ ನಕಲಿ ಶಿಕ್ಷಣ ಪ್ರಮಾಣಪತ್ರ ಸಲ್ಲಿಸಿ ಶಿಕ್ಷಕ ಹುದ್ದೆ ಪಡೆದಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಿರುವುದಾಗಿ ಸಚಿವರು ಹೇಳಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಆಧಾರ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದ್ದು ಇದುವರೆಗೆ ಶೇ.85ರಷ್ಟು ಶಿಕ್ಷಕರು ಆಧಾರ್ ಸಂಖ್ಯೆ ನೀಡಿದ್ದಾರೆ. ಶೇ.100ರಷ್ಟು ಶಿಕ್ಷಕರು ಆಧಾರ್ ಸಂಖ್ಯೆ ನೀಡಿದಾಗ ಈ ಪ್ರಮಾಣ (ನಕಲಿ ಶಿಕ್ಷಕರ ಪ್ರಮಾಣ) ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೆಲವರು ಅನ್ಯವಿಧಾನಗಳನ್ನು ಬಳಸಿಕೊಂಡು ಪೂರ್ಣಕಾಲಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಆದರೆ ಕೇಂದ್ರೀಯ ವಿವಿಗಳಲ್ಲಿ ಇಂತಹ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಕೆಲವು ರಾಜ್ಯಗಳ ವಿವಿಗಳಲ್ಲಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ನಕಲಿ ಶಿಕ್ಷಕರಿರುವುದು ಆಧಾರ್ ಕಡ್ಡಾಯಗೊಳಿಸಿದ ಕಾರಣ ಬೆಳಕಿಗೆ ಬಂದಿದೆ. ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜಾವಡೇಕರ್ ಹೇಳಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಂಡುಬಂದಿರುವ ಹೆಚ್ಚಳ, ಒಟ್ಟಾರೆ ನೋಂದಣಿ ಪ್ರಮಾಣ(ಜಿಇಆರ್)ದಲ್ಲಿ ಹೆಚ್ಚಳ, ಕಳೆದ ಐದು ವರ್ಷಗಳಲ್ಲಿ ವಿವಿ ಹಾಗೂ ಕಾಲೇಜುಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಕಲಿ ಶಿಕ್ಷಕರ ಪ್ರಮಾಣ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜನಸಂಖ್ಯೆಯಲ್ಲಿ ಅರ್ಹ ವಯಸ್ಸಿನವರು ಉನ್ನತ ಶಿಕ್ಷಣ ಪಡೆಯುವ ಪ್ರಮಾಣವಾಗಿರುವ ಜಿಇಆರ್ , ಐದು ವರ್ಷದ ಹಿಂದೆ ಶೇ.21.5 ಆಗಿದ್ದರೆ ಈಗ ಶೇ.25.5 ಆಗಿರುತ್ತದೆ. 2012-13ರಲ್ಲಿ ಮುಸ್ಲಿಮ್ ಸಮುದಾಯದವರ ಜಿಇಆರ್ ಶೇ.4.15 ಆಗಿತ್ತು. 2016-17ರಲ್ಲಿ ಈ ಪ್ರಮಾಣ ಶೇ.4.90ರಷ್ಟಾಗಿದ್ದು ಹೆಚ್ಚೇನೂ ಬದಲಾವಣೆ ಆಗಿಲ್ಲ. ಇತರ ಹಿಂದುಳಿದ ವರ್ಗದವರ ಜಿಆರ್‌ವಿ ಪ್ರಮಾಣ ಇದೇ ಅವಧಿಯಲ್ಲಿ ಶೇ.0.33ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

ಎಲ್ಲಾ ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಒದಗಿಸಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸೂಚನೆ ರವಾನಿಸಿದೆ. ಆಧಾರ್ ಸಂಖ್ಯೆಯನ್ನು ನೀಡಿದರೆ ಯಾವುದೇ ಸಮಸ್ಯೆಯಾಗದು. ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ ನೀಡಿದ ರೀತಿಯಲ್ಲೇ ಆಧಾರ್ ಸಂಖ್ಯೆಯನ್ನೂ ನೀಡಬಹುದು. ಆಧಾರ್ ಕಾರ್ಡ್‌ನ ಮಾಹಿತಿಯನ್ನು ಗೌಪ್ಯವಾಗಿ ರಕ್ಷಿಸಿಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News