×
Ad

ಜಾಗತಿಕ ತಾಪಮಾನದ ಹೆಚ್ಚಳ ವಿಶ್ವದ ಮುಂದಿರುವ ಸವಾಲು: ನೊಬೆಲ್ ಪ್ರಶಸ್ತಿ ವಿಜೇತ ಸರ್ಜ್ ಹ್ಯಾರೋಚೆ

Update: 2018-01-06 21:17 IST

ಮಂಗಳೂರು, ಜ.6: ಮನುಕುಲ ಎದುರಿಸುತ್ತಿರುವ ಜಾಗತಿಕ ಸವಾಲು ಎದುರಿಸಲು ವಿಜ್ಞಾನವನ್ನು ಸರಿಯಾದ ದಾರಿಯಲ್ಲಿ ಸಮರ್ಪಕವಾಗಿ ಬಳಕೆ ಮಾಡಬೇಕಾಗಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರದ ವಿಜ್ಞಾನಿ ಸರ್ಜ್ ಹ್ಯಾರೋಚೆ ತಿಳಿಸಿದ್ದಾರೆ.

ನಗರದ ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ವ್ಯವಹಾರ ಆಡಳಿತ ಕಾಲೇಜಿನಲ್ಲಿ ಭಾರತ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ, ರಾಜ್ಯದ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿ ಸಮಿತಿ, ಕರ್ನಾಟಕ ಸರಕಾರ ಜೈವಿಕ ತಂತ್ರಜ್ಞಾನ ಮತ್ತು ಮಾಹಿತ ತಂತ್ರಜ್ಞಾನ, ವಿಟಿಯು, ಮಂಗಳೂರು ವಿ.ವಿ. ಹಾಗೂ ಬೆಂಗಳೂರಿನ ರಾಮಯ್ಯ ತಂತ್ರಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಜ.6 ರಿಂದ 10ರವರೆಗೆ ಹಮ್ಮಿಕೊಂಡ ವಿಜ್ಞಾನ-ತಂತ್ರಜ್ಞಾನ-ಆಡಳಿತ ನಿರ್ವಹಣೆಗೆ ಸಂಬಂಧಿಸಿದ ‘ಸಹ್ಯಾದ್ರಿ ಕಾನ್ ಕ್ಲೇವ್’ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಜಾಗತಿಕ ತಾಪಮಾನದ ಹೆಚ್ಚಳದ ಸಮಸ್ಯೆ ಸಮಸ್ತ ವಿಶ್ವದ ಮುಂದಿರುವ ಸವಾಲಾಗಿದೆ. ಮನುಷ್ಯನನ್ನು ಕಾಡುವ ಹೊಸ ಹೊಸ ಮಾರಕ ರೋಗಗಳ ಬಗ್ಗೆ ವಿಜ್ಞಾನದಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕಾಗಿರುವುದು ಜಗತ್ತಿನ ಎಲ್ಲಾ ದೇಶಗಳ ಮುಂದಿರುವ ಸವಾಲಾಗಿದೆ. ಇಂದು ಮೂಲ ವಿಜ್ಞಾನದ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಿದೆ. ಈ ಸಮಸ್ಯೆ ಭಾರತ ಮಾತ್ರವಲ್ಲದೆ ವಿಶ್ವದ ಎಲ್ಲಾ ಕಡೆ ಕಂಡು ಬರುತ್ತಿದೆ. ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ವಹಿಸಲು ಯುವ ಜನರಿಗೆ ಪ್ರೇರಣೆ ನೀಡಬೇಕಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ, ಹೊಸತನ್ನು ಹುಡುವ ಪ್ರವೃತ್ತಿ ಮುಖ್ಯ. ವಿಜ್ಞಾನ ಎಂದರೆ ಆವಿಷ್ಕಾರ. ನಮ್ಮ ಮಿದುಳಿನಲ್ಲಿ ಆವಿಷ್ಕಾರದ ಚಿಂತನೆ ಮೂಡಬೇಕಾಗಿದೆ. ಆವಿಷ್ಕಾರದಲ್ಲಿ ಸಿಗುವ ಆನಂದವನ್ನು ವಿಜ್ಞಾನದಿಂದ ಸಿಗುವ ತೃಪ್ತಿ ಎನ್ನಬಹುದು. ಮೂಲ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡರೆ ಈ ರೀತಿ ಹೊಸತರ ಹುಡುಕಾಟಕ್ಕೆ ನಮ್ಮನ್ನು ಸಜ್ಜುಗೊಳಿಸುತ್ತದೆ ಎಂದು ಸರ್ಜ್ ಹ್ಯಾರೋಚೆ ತಿಳಿಸಿದ್ದಾರೆ.

ಭಾರತದ ವಿಜ್ಞಾನ ಕ್ಷೇತ್ರದಲ್ಲಿ ದೈತ್ಯ ಪ್ರತಿಭೆಗಳಿವೆ

ಭಾರತದ ವಿಜ್ಞಾನ ಕ್ಷೇತ್ರದಲ್ಲಿ ನನಗೆ ಮಾರ್ಗದರ್ಶನ ಮಾಡಿದ ಚೆನ್ನೈನ ರಾಮಚಂದ್ರನ್ ಎಂಬ ವಿಜ್ಞಾನ ಅತ್ಯಂತ ಪ್ರತಿಭಾವಂತ ವಿಜ್ಞಾನಿ ಎಂದು ರಸಾಯನ ಶಾಸ್ತ್ರ ವಿಜ್ಞಾನದಲ್ಲಿ 1968ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಾದ ಆ್ಯಡಾ ಇ.ಯೋನಾಥ್ ತಿಳಿಸಿದ್ದಾರೆ.

ನಾನು ವಿಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಏರಲು ಭಾರತದ ಮದ್ರಾಸಿನಲ್ಲಿದ್ದ ರಾಮಚಂದ್ರನ್ ರಂತಹ ಪ್ರತಿಭಾವಂತ ವಿಜ್ಞಾನಿಗಳು ನನಗೆ ಮಾರ್ಗದರ್ಶನ ಮಾಡುತ್ತಾ ನನ್ನನ್ನು ಪೋತ್ರಾಹಿಸುತ್ತಿದ್ದರು. ಅವರಲ್ಲಿ ತಾಳ್ಮೆ ಇತ್ತು, ಪ್ರತಿಭೆ ಇತ್ತು, ಪ್ರಾಮಾಣಿಕತನವೂ ಕೂಡಿದ್ದ ಮಹಾನ್ ವಿಜ್ಞಾನಿಯಾಗಿದ್ದರು ಎಂದು ಭಾರತೀಯ ವಿಜ್ಞಾನಿಯ ಬಗ್ಗೆ ಯೊನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾನು ಈ ಹಿಂದೆ ಮದ್ರಾಸಿಗೆ ಭೇಟಿ ನೀಡಿದ್ದೆ ಆ ಸಂದರ್ಭ ಏರ್‌ಪೋರ್ಟ್‌ ಬಳಿ ನನ್ನ ಬಳಿ ಇದ್ದ ವಸ್ತುಗಳು ಕಳವಾಯಿತು. ಆದರೆ ಇಲ್ಲಿನ ಜನರ ಸ್ನೇಹ ಪರ ಮನೋಭಾವ ನನಗೆ ಮೆಚ್ಚುಗೆಯಾಗಿದೆ. ಆ ಕಾರಣದಿಂದ ನನಗೆ ಭಾರತ ಅಂದರೆ ಇಷ್ಟ, ಇಲ್ಲಿನ ವಿಜ್ಞಾನ -ವಿಜ್ಞಾನಿಗಳು ಅಂದರೆ ಇಷ್ಟ ಜೊತೆಗೆ ಇಲ್ಲಿನ ಬಾಲಿವುಡ್ ಸಿನಿಮಾ ಅಂದರೂ ಇಷ್ಟ ಎಂದು ಯೋನಾಥ್ ತಿಳಿಸಿದ್ದಾರೆ.

ಸಹ್ಯಾದ್ರಿ ಕಾನ್‌ಕ್ಲೇವ್ ಉದ್ಘಾಟನೆ

ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸಹ್ಯಾದ್ರಿ ಕಾನ್‌ಕ್ಲೇವ್ ಉದ್ಘಾಟಿಸಿ ಮಾತನಾಡುತ್ತಾ, ವಿಜ್ಞಾನ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆ ಮಾನವನ ಬದುಕಿನಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ನಮ್ಮ ಬದುಕನ್ನು ಉತ್ತಮ ಗೊಳಿಸಲು ಕಾರಣವಾಗಿದೆ. ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳು ಸೇರಿದಂತೆ ಜಗತ್ತಿನ ಮಹಾನ್ ವಿಜ್ಞಾನಿಗಳನ್ನು ಒಂದು ಕಡೆ ಸೇರಿಸಿ ಅವರೊಂದಿಗೆ ಯುವ ವಿಜ್ಞಾನಿಗಳು, ತಂತ್ರಜ್ಞರು ತಮ್ಮ ಅನುಭವಗಳನ್ನು ಹೆಚ್ಚಿಸಿಕೊಳ್ಳಲು ಒಳ್ಳೆಯ ಅವಕಾಶ ಅದಕ್ಕಾಗಿ ಸಹ್ಯಾದ್ರಿ ಸಂಸ್ಥೆಯ ಸಂಘಟಕರನ್ನು ಅಭಿನಂದಿಸುವುದಾಗಿ ತಿಳಿಸಿದರು.

ವಸ್ತುಪ್ರದರ್ಶನವನ್ನು ಉದ್ಘಾಟಿಸಿದ ರಾಜ್ಯ ವಿಜ್ಞಾನ ತಂತ್ರಜ್ಞಾನ, ಯೋಜನೆ ಮತ್ತು ಅಂಕಿ ಅಂಶ ಖಾತೆಯ ಸಚಿವ ಎಂ.ಆರ್.ಸೀತಾರಾಮ ಮಾತನಾಡುತ್ತಾ, ರಾಜ್ಯದಲ್ಲಿ ಖಗೋಳದ ಬಗ್ಗೆ ಮಾಹಿತಿ ನೀಡಲು ಮೊಬೈಲ್ ಪ್ಲಾನಿಟೋರಿಯಂಗೆ ಚಾಲನ ನೀಡಲಾಗಿದೆ. ಸಹ್ಯಾದ್ರಿಗೂ ಈ ಸಂಚಾರಿ ತಾರಾಲಯ ಆಗಮಿಸಿದೆ. ಮಂಗಳೂರಿನ ಪಿಲಿಕುಳದಲ್ಲಿ 42 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಿಜಿಟಲ್ ತಾರಾಲಯ ಫೆಬ್ರವರಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿ ಸಮಾರಂಭಕ್ಕೆ ಶುಭಹಾರೈಸಿದರು.

ಶ್ರೀರಾಮ ಕೃಷ್ಣ ಮಠದ ಮುಖ್ಯಸ್ಥ ಸ್ವಾಮಿ ಜಿತಕಾಮಾನಂದಾಜಿ ದೀಪ ಬೆಳಗಿಸಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಂಡಾರಿ ಫೌಂಡೇಶನ್ ಅಧ್ಯಕ್ಷ ಮಂಜುನಾಥ ಭಂಡಾರಿ ಕಾರ್ಯಕ್ರಮ ಸಂಯೋಜನೆಯ ಬಗ್ಗೆ ವಿವರಿಸುತ್ತಾ, ನೊಬೆಲ್ ಪ್ರಶಸ್ತಿ ವಿಜೇತರ ಜೊತೆ ವಿದ್ಯಾರ್ಥಿಗಳು ಅನುಭವ ಹಂಚಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಬಹು ದಿನದ ಕನಸಾಗಿತ್ತು ಇಂದು ಸಾಕಾರಗೊಂಡಿರುವುದು ಸಂತಸವನ್ನುಂಟು ಮಾಡಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಉಮೇಶ್ ಎಂ.ಬೂಶಿ ಸ್ವಾಗತಿಸಿದರು. ಉದ್ಯಮಿ ಅಲ್‌ಕಾರ್ಗೋ ಸಂಸ್ಥೆಯ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಶುಭಹಾರೈಸಿದರು.

ಸಹ್ಯಾದ್ರಿ ಕಾಲೇಜಿನ ನಿರ್ದೇಶಕ ಡಾ.ಡಿ.ಎಲ್.ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಟ್ರಸ್ಟಿಗಳಾದ ದೇವದಾಸ ಹೆಗ್ಡೆ, ಜಗನ್ನಾಥ ಚೌಟ ಹಾಗೂ ಅತಿಥಿಗಳಾದ ಪ್ರಜ್ವಲ್ ಭೈರಪ್ಪ, ಸತೀಶ್ ತ್ರಿಪಾಠಿ, ರಾಬರ್ಟ್‌ ಸನ್, ಅನೀಶ್ ಆರೋರಾ, ಸತ್ಯ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News