ವಿಷ ಕುಡಿದು ಬಿಜೆಪಿ ಕಚೇರಿಗೆ ನುಗ್ಗಿದ ಉದ್ಯಮಿ

Update: 2018-01-06 17:00 GMT

ಡೆಹ್ರಾಡೂನ್, ಜ.6: ನೋಟು ಅಮಾನ್ಯ ಮತ್ತು ಜಿಎಸ್ಟಿಯಿಂದಾಗಿ ತನ್ನ ಉದ್ಯಮದಲ್ಲಿ ನಷ್ಟ ಅನುಭವಿಸಲು ರಾಜ್ಯ ಮತ್ತು ಕೇಂದ್ರ ಸರಕಾರವೇ ಹೊಣೆ ಎಂದು ಆರೋಪಿಸಿದ ಉದ್ಯಮಿಯೊಬ್ಬರು ವಿಷ ಕುಡಿದು ಬಿಜೆಪಿ ಕಚೇರಿಗೆ ನುಗ್ಗಿದ ಘಟನೆ ಉತ್ತರಖಂಡದ ಡೆಹ್ರಾಡೂನ್‌ನಲ್ಲಿ ಶನಿವಾರ ಸಂಭವಿಸಿದೆ.

ಬಿಜೆಪಿ ಸಚಿವ ಸುಬೋದ್ ಉನಿಯಲ್ ಜನತಾ ದರ್ಬಾರ್‌ನಲ್ಲಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಉತ್ತರಖಂಡದ ಹಲ್ದ್ವಾನಿ ಪ್ರದೇಶದ ನಿವಾಸಿಯಾಗಿರುವ ಪಾಂಡೆ ಕೇಂದ್ರದ ನೀತಿಗಳು ಹೇಗೆ ತನ್ನ ಸಾರಿಗೆ ವ್ಯವಹಾರದ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ವಿವರಿಸಿದ್ದಾರೆ. “ಸರಕಾರವು ನನ್ನನ್ನು ಸಂಕಷ್ಟಕ್ಕೀಡುಮಾಡಿದೆ. ಜಿಎಸ್‌ಟಿ ಮತ್ತು ನೋಟು ಅಮಾನ್ಯದ ನಂತರ ನಾನು ಸಾಲಗಾರನಾಗಿದ್ದೇನೆ” ಎಂದು ಪಾಂಡೆ ಅಳುತ್ತಲೇ ಉನಿಯಲ್ ಅವರಿಗೆ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. “ಕಳೆದ ಐದು ತಿಂಗಳಿಂದ ನಾನು ಸರಕಾರಕ್ಕೆ ಈ ಬಗ್ಗೆ ತಿಳಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಮುಖ್ಯಮಂತ್ರಿಗಳು ನಿಷ್ಪ್ರಯೋಜಕರಾಗಿದ್ದಾರೆ. ಅವರು ಯಾರ ಮಾತನ್ನೂ ಕೇಳುವುದಿಲ್ಲ. ನನ್ನಂತೆ ಹಲವಾರು ಜನರು ಇದ್ದಾರೆ. ನಾನಿನ್ನು ಬದುಕುವುದಿಲ್ಲ, ನಾನು ವಿಷ ಕುಡಿದಿದ್ದೇನೆ” ಎಂದು ಹೇಳಿದ ಪಾಂಡೆ ತನ್ನ ಜೇಬಿನಲ್ಲಿದ್ದ ವಿಷದ ಖಾಲಿ ಪ್ಯಾಕೆಟನ್ನು ತೋರಿಸಿದ್ದಾರೆ.

ಇದರಿಂದ ಕಚೇರಿಯಲ್ಲಿ ಕೋಲಾಹಲವೆಬ್ಬಿದ್ದು ಕೂಡಲೇ ಪಾಂಡೆಯನ್ನು ಡೂನ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರಿಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಪಾಂಡೆ ವಿಷ ಕುಡಿದಿರುವುದನ್ನು ದೃಡಪಡಿಸಿರುವ ವೈದ್ಯರು ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಪಾಂಡೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಮುಂದಿನ 24 ಗಂಟೆಗಳು ಬಹಳ ಮುಖ್ಯವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ ಪಾಂಡೆ ತನ್ನ ಸಮಸ್ಯೆಯ ಬಗ್ಗೆ ಹಲವು ಬಾರಿ ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಉತ್ತರಖಂಡದ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಅವರಿಗೆ ಪತ್ರ ಬರೆದಿದ್ದರು. ಆದರೆ ಅವರಿಗೆ ಯಾವ ನೆರವನ್ನೂ ನೀಡಲಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಪಾಂಡೆ ಜಿಎಸ್ಟಿ ಮತ್ತು ನೋಟು ಅಮಾನ್ಯದ ಕಾರಣದಿಂದ ವಿಷ ಸೇವಿಸಿರುವುದಾಗಿ ತಿಳಿಸಿದ್ದಾರೆ. ಉದ್ಯಮದಲ್ಲಿ ನಷ್ಟ ವೈಯಕ್ತಿಕ ಸಮಸ್ಯೆಯಲ್ಲ. ಅವರ ನಡೆಯು ರಾಜಕೀಯ ಪ್ರೇರಿತವಾಗಿರುವಂತೆ ಕಾಣುತ್ತದೆ ಎಂದು ಉನಿಯಲ್ ಸಂದೇಹ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News