ಸಚಿವ ರಮಾನಾಥ ರೈ ವೈಫಲ್ಯವನ್ನು ಮುಚ್ಚಿಡಲು ಸಂಘಟನೆಯ ಮೇಲೆ ಆರೋಪ: ಪಿಎಫ್‌ಐ
ಮಂಗಳೂರು, ಜ. 6: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಮರ ಮತಗಳನ್ನು ಪಡೆದು ಜಯಗಳಿಸಿದ ಸಚಿವ ರಮಾನಾಥ ರೈ ಕಳೆದ ನಾಲ್ಕು ವರ್ಷಗಳಲ್ಲಿ ಮುಸ್ಲಿಮರ ಸಮಸ್ಯೆಗಳಿಗೆ ಸ್ಪಂದಿಸದೆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದು, ಇದನ್ನು ಮುಚ್ಚಿಡಲು ದ.ಕ. ಜಿಲ್ಲಾ ಕಾಂಗ್ರೆಸ್ ಪಿಎಫ್‌ಐ ಸಂಘಟನೆಯ ಮೇಲೆ ನಿರಾಧಾರ ಆರೋಪ ಮಾಡುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜಿಲ್ಲಾದ್ಯಕ್ಷ ನವಾಝ್ ಉಳ್ಳಾಲ ಪ್ರಟಕನೆಯಲ್ಲಿ ತಿಳಿಸಿದ್ದಾರೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ನನ್ನ ಮತ್ತು ಪ್ರಭಾಕರ್ ಭಟ್ ನಡುವೆ ನೇರ ಸ್ಪರ್ಧೆ ಎಂದು ಹೇಳಿ ಮುಸ್ಲಿಮರ ಮತಗಳನ್ನು ಪಡೆಯಲು ಸಚಿವರು ಯಶಸ್ವಿಯಾಗಿದ್ದರು. ಆದರೆ ಚುನಾವಣೆಯಲ್ಲಿ ವಿಜಯಿಯಾದ ನಂತರ ಪ್ರಭಾಕರ್ ಭಟ್ ನಿರಂತರವಾಗಿ ಮುಸ್ಲಿಮರ ವಿರುದ್ಧ ಕೋಮು ಪ್ರಚೋದನಕಾರಿ ಭಾಷಣ ಮಾಡಿ ಗಲಭೆಗಳಿಗೆ ನೇರ ಕಾರಣವಾಗಿದ್ದರೂ ಕನಿಷ್ಠ ಪಕ್ಷ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಉಸ್ತುವಾರಿ ಸಚಿವರಿಗೆ ಸಾಧ್ಯವಾಗಿಲ್ಲ. ವರ್ಷಗಳ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕರ್ತ ಸಜಿಪ ನಾಸಿರ್ ಕೊಲೆ, ಜಲೀಲ್ ಕರೋಪಾಡಿ, ಜೈಲಿನಲ್ಲಿ ಹತ್ಯೆಯಾದ ಮುಸ್ತಫಾ ಕಾವೂರು ಇವರ ಕುಟುಂಬಕ್ಕೆ ಪರಿಹಾರಧನ ವಿತರಿಸದ ಸಚಿವರು ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಪರಿಹಾರಧನ ವಿತರಿಸಿರುವುದು ಸಚಿವರ ದ್ವಿಮುಖ ನೀತಿಗೆ ಉದಾಹರಣೆಯಾಗಿದೆ. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಜಲೀಲ್ ಕರೋಪಾಡಿ ಹತ್ಯೆಯ ಪ್ರಮುಖ ಆರೋಪಿ ಕಾಂಗ್ರೆಸ್ ಗ್ರಾಮ ಪಂಚಾಯತ್ ಸದಸ್ಯನನ್ನು ಬಂಧಿಸಲು ಸಾಧ್ಯವಾಗಿಲ್ಲ. ಕನಿಷ್ಠ ಪಕ್ಷ ಆತನನ್ನು ಪಕ್ಷದಿಂದ ಉಚ್ಚಾಟಿಸಲು ತಯಾರಾಗದ ಸಚಿವರು ಮತ್ತು ದ.ಕ. ಕಾಂಗ್ರೆಸ್‌ಗೆ ಮುಸ್ಲಿಮರ ಬಗ್ಗೆ ಮಾತನಾಡುವ ಮತ್ತು ಅವರ ಮತಗಳನ್ನು ಕೇಳುವ ನೈತಿಕತೆ ಇರುವುದಿಲ್ಲ. ನಿರಂತರವಾಗಿ ತಮ್ಮ ಕ್ಷೇತ್ರದಲ್ಲಿ ಕೋಮುಗಲಭೆ ನಡೆಯುತ್ತಿದ್ದಾಗ ಮುಸ್ಲಿಮರೇ ಅತೀ ಹೆಚ್ಚು ಬಲಿಪಶುಗಳಾಗಿದ್ದು, ಕಲ್ಲಡ್ಕ ಗಲಭೆಗೆ ಸಂಘಪರಿವಾರವೇ ನೇರ ಕಾರಣ ಎಂದು ಗೊತ್ತಿದ್ದರೂ ಅತ್ಯಂತ ಹೆಚ್ಚು ಮುಸ್ಲಿಮರ ಮೇಲೆಯೇ ಕೇಸು ದಾಖಲಾಗಿದೆ. ಮಂಗಳೂರಿನ ಸಿ.ಸಿ.ಬಿ ಪೋಲಿಸರ ದೌರ್ಜನ್ಯಕ್ಕೆ ಬಲಿಯಾದ ಅಹ್ಮದ್ ಖುರೇಷಿಯ ನ್ಯಾಯಕ್ಕಾಗಿ ಹೋರಾಟ ಮಾಡಿದ ಪ್ರತಿಭಟನಕಾರರ ಮೇಲೆ ಲಾಠಿಚಾರ್ಜ್ ಮಾಡಿದ ಸರಕಾರ ಗಲಭೆ ನಡೆಸುವುದಕ್ಕಾಗಿ ಬಿ.ಸಿ ರೋಡ್ ಸೇರಿದಂತೆ ಜೆಲ್ಲೆಯ ಹಲವು ಭಾಗಗಳಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನೆ ಮಾಡಿದರೂ ಆ ವೇಳೆ ಲಾಠಿಚಾರ್ಜ್ ನಡೆಸಿಲ್ಲ. ಇವೆಲ್ಲದಕ್ಕೂ ಸಚಿವರು ಮತ್ತು ಜಿಲ್ಲೆಯ ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಉತ್ತರಿಸಬೇಕಾಗಿದೆ. ನಿರಂತರವಾಗಿ ಸಂಘಪರಿವಾರವನ್ನು ತೋರಿಸಿ ಮುಸ್ಲಿಮರನ್ನು ಭಯಪಡಿಸುತ್ತಾ ಬಾಲಿಷ ಹೇಳಿಕೆ ನೀಡುತ್ತಿದ್ದಾರೆ.
ಬಿಜೆಪಿ ಆರೋಪಿಸುವಂತೆ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸುತ್ತಿರುವುದು ನಿಜವಾಗಿದ್ದರೆ ಸ್ವಾತಂತ್ರ್ಯ ನಂತರ ಮುಸ್ಲಿಮ್ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಉನ್ನತ ಸ್ತರದಲ್ಲಿರುತ್ತಿತ್ತು. ಆದರೆ ಇಂದಿಗೂ ಭಾರತೀಯ ಮುಸ್ಲಿಮರ ಸ್ಥಿತಿಗತಿ ಹಿಂದುಳಿದಿದೆ ಎಂದು ಪ್ರಕಟನೆ ತಿಳಿಸಿದೆ.
ಪಾಪ್ಯುಲರ್ ಫ್ರಂಟ್ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಇದುವರೆಗೆ ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್‌ನ್ನಾಗಿ ಬಳಸುತ್ತಿದ್ದ ಕಾಂಗ್ರೆಸ್‌ಗೆ ಪಾಪ್ಯುಲರ್ ಫ್ರಂಟ್‌ನ್ನು ಎದುರಿಸಲು ಸಾಧ್ಯವಾಗಿಲ್ಲ. ಜನಸಾಮಾನ್ಯರ ಹಕ್ಕುಗಳಿಗಾಗಿ ಮತ್ತು ಬಿಜೆಪಿಯ ಕೋಮು ರಾಜಕೀಯದ ವಿರುದ್ಧ ಪಾಪ್ಯುಲರ್ ಫ್ರಂಟ್‌ನ ಹೋರಾಟ ಮುಂದುವರಿಯಲಿದೆ. ಜಾತ್ಯತೀತ ಸೋಗಿನ ಪಕ್ಷಗಳ ಮುಖವಾಡ ಇದೀಗ ಒಂದೊಂದಾಗಿ ಕಳಚುತ್ತಿದ್ದು ಮೂಲೆ ಗುಂಪಾದ, ಶೋಷಿತ, ಮರ್ದಿತ ಅಲ್ಪಸಂಖ್ಯಾತರು ಮುಂದಿನ ದಿನಗಳಲ್ಲಿ ರಾಜಕೀಯ ಶಕ್ತಿಯಾಗಿ ರೂಪೂಗೊಳ್ಳುವುದೊಂದೇ ಈ ಎಲ್ಲಾ ಸಮಸ್ಯೆಗಳಿಗಿರುವ ಅಂತಿಮ ಪರಿಹಾರ ಎಂದು ಪಿಎಫ್‌ಐ ಜಿಲ್ಲಾಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.