ಕೂಳೂರಿನಲ್ಲಿ ನೆರವೇರಲಿದೆ ಬಶೀರ್ ಅಂತ್ಯ ಸಂಸ್ಕಾರ
ಮಂಗಳೂರು, ಜ.7: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿರುವ ಆಕಾಶಭವನ ನಿವಾಸಿ ಬಶೀರ್(47) ಮೃತದೇಹದ ಅಂತ್ಯ ಸಂಸ್ಕಾರವು ಕೂಳೂರಿನ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
‘‘ಬಶೀರ್ ಅವರ ಮೃತದೇಹದ ಯಾವುದೇ ಮೆರವಣಿಗೆ ನಡೆಸುವುದಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಆಕಾಶಭವನದಲ್ಲಿರುವ ಬಶೀರ್ ಅವರ ಮನೆಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಮಹಿಳೆಯರಿಗೆ ಮಾತ್ರ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಮೃತದೇಹವನ್ನು ಕೂಳೂರು- ಪಂಜಿಮೊಗರಿನಲ್ಲಿರುವ ಮುಹಿಯುದ್ದೀನ್ ಜುಮಾ ಮಸೀದಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಎಲ್ಲಾ ಪುರುಷರಿಗೆ ಬಶೀರ್ ಅವರ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ನಡುವೆ ಯಾವುದೇ ರೀತಿಯಲ್ಲಿ ಶಾಂತಿ ಕದಡಲು ಯಾರೂ ಪ್ರಯತ್ನಿಸಬಾರದು. ಬಶೀರ್ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುವಂತೆ ಬಶೀರ್ ಅವರ ಸಹೋದರ ಹಕೀಂ ಕೂಳೂರು ಭಾವುಕರಾಗಿ ಮನವಿ ಮಾಡಿದ್ದಾರೆ.
ಶಾಂತಿ ಕಾಪಾಡಲು ಸಚಿವರಾದ ರೈ, ಖಾದರ್ ಮನವಿ
ಬಶೀರ್ ಕೊನೆಯುಸಿರೆಳೆದ ಸುದ್ದಿ ತಿಳಿಯುತ್ತಿದ್ದಂತೆ ಎ.ಜೆ. ಆಸ್ಪತ್ರೆಗೆ ಭೇಟಿ ನೀಡಿರುವ ಆಹಾರ ಸಚಿವ ಯು.ಟಿ.ಖಾದರ್, ಶಾಸಕ ಬಿ.ಎ.ಮೊಯ್ದಿನ್ ಬಾವ ಅವರು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಾಂತಿ ಕಾಪಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಬಶೀರ್ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ಎಡಿಜಿಪಿ ಕಮಲ್ ಪಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಎ.ಜೆ. ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮಂಗಳೂರಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.