​ದೇವರು, ಧರ್ಮದ ಹೆಸರಿನ ಹಿಂಸೆ ಸಹಿಸಲಾಗದು: ಬೆಳ್ತಂಗಡಿಯಲ್ಲಿ ಸಿದ್ದರಾಮಯ್ಯ

Update: 2018-01-07 15:42 GMT

ಬೆಳ್ತಂಗಡಿ, ಜ.7: ದೇವರು, ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಹತ್ಯೆ ಮಾಡುವ, ಹಿಂಸಾಚಾರ ನಡೆಸುವುದನ್ನು ಸಹಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲು ರವಿವಾರ ಆಗಮಿಸಿದ ಅವರು ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದಂತೆ 76 ಕೋ.ರೂ.ಗಳ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.

ತಾವು ನಂಬಿದ ಧರ್ಮವನ್ನು ಪಾಲನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ ಇತರ ಧರ್ಮದವರನ್ನು ದ್ವೇಷಿಸುವುದು ಕೋಮುವಾದ. ಮನುಷ್ಯನನ್ನು ಕೊಂದು ಹೆಣವನ್ನು ಮುಂದಿಟ್ಟುಕೊಂಡು ಸಾವಿನಲ್ಲೂ ರಾಜಕೀಯ ಮಾಡುವುದನ್ನು ಎಲ್ಲಾ ನಾಗರಿಕರು ಸೇರಿ ತಡೆಯಬೇಕಾಗಿದೆ. ಅಮಾಯಕರ ಕೊಲೆ, ಸಮಾಜದ ಶಾಂತಿ ಕದಡುವ ಕೃತ್ಯವನ್ನು ತಡೆಯುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಸಂಘಟಿತ ಗೂಂಡಾಗಿರಿಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಾಜಕ್ಕೆ ಬೆಂಕಿ ಹಾಕಿ ಹಾಕುವವರು ತೋಳ, ಕುರಿಯಂತೆ ರಮಾನಾಥ ರೈ, ಸಿದ್ದರಾಮಯ್ಯನ ಕಡೆ ಬೆರಳು ತೋರಿಸಿ ಅವರು ಹೋದ ಕಡೆ ಎಲ್ಲಾ ಕೊಲೆಯಾಗುತ್ತಿದೆ ಎಂದು ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಂಸದೆಯೊಬ್ಬರ ಇತ್ತೀಚೆಗೆ ಮಾಡಿದ ಟೀಕೆಗೆ ಪ್ರತಿಕ್ರೀಯೆ ನೀಡಿದರು.

ಅವರು ‘ಕಾಂಗ್ರೆಸ್ ಮುಕ್ತ ’ಎನ್ನುತ್ತಾರೆ,‘ನಾವು ಹಸಿವು ಮುಕ್ತ ’ಎನ್ನುತ್ತೇವೆ:- ಅವರು ಕಾಂಗ್ರೆಸ್ ಮುಕ್ತ ಕರ್ನಾಟಕ ಎನ್ನುತ್ತಾ ತಿರುಗುತ್ತಿದ್ದಾರೆ. ಅವರಿಗೆ ಜನರ ಸಮಸ್ಯೆಗಳು ಕಾಣುತ್ತಿಲ್ಲ. ನಾವು ಹಸಿವು, ಪೌಷ್ಟಿಕತೆಯಿಂದ ಮಕ್ಕಳು ಸಯುವುದನ್ನು ತಡೆಯುವುದು ಬಡತನ ಮುಕ್ತ ಕರ್ನಾಟಕ ಮಾಡುವುದು ನಮ್ಮ ಗುರಿ ಈ ನಿಟ್ಟಿ ಜನರಿಗೆ ನೀಡಿದ ಎಲ್ಲಾ ಆಶವಸನೆಗಳನ್ನು ಈಡೇರಿಸಿದ್ದೇವೆ. ಅವರು ಸಬ್‌ಕಾ ಸಾತ್ ಎನ್ನುತ್ತಾ ಕೆಲವರನ್ನು ಹೊರಗಿಡುತ್ತಾರೆ. ನಮ್ಮದು ರಾಜ್ಯದಲ್ಲಿ ಎಲ್ಲಾ ಜಾತಿ, ಮತ, ಧರ್ಮದ ಜನರು ಒಂದೆ ತಾಯಿಯ ಮಕ್ಕಳಂತೆ ಬದುಕಬೇಕು, ಅಭಿವೃದ್ಧಿಯಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎನ್ನುವುದು ನಮ್ಮ ಪಕ್ಷದ ಗುರಿಯಾಗಿದೆ. ಅದಕ್ಕಾಗಿ ಕರಾವಳಿಯಲ್ಲಿ ಪಾದಯಾತ್ರೆಯನ್ನು ಈ ಹಿಂದೆ ನಡೆಸಿದ್ದೇವೆ. ಕರಾವಳಿಯನ್ನು ಕೋಮುವಾದಿಗಳ ಪ್ರಯೋಗ ಶಾಲೆ ಆಗದಂತೆ ನೊಡಿಕೊಳ್ಳಬೇಕಾಗಿದೆ. ಕಳೆದ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಸೋತ ಬಿಜೆಪಿ ಹತಾಶೆಯಿಂದ ಇಲ್ಲಿ ಕೋಮುವಾದಿ ಚಟುವಟಿಕೆಗೆ ಮುಂದಾಗಿದೆ. ಉತ್ತರ ಪ್ರದೇಶದ ಜಂಗಲ್ ರಾಜ್ ಕುಖ್ಯಾತಿ ಪಡೆದ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರಿಂದ ನಾವು ಏನು ಕಲಿಯವಂತಹುದಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

ರಾಷ್ಟ್ರಗೀತೆ, ನಾಡ ಗೀತೆಯ ಬರೀ ಹಾಡುವುದಕ್ಕಲ್ಲ:- ರಾಷ್ಟ್ರಗೀತೆ, ನಾಡಗೀತೆಗಳು ಕೇವಲ ಹಾಡುವುದಕ್ಕಲ್ಲ. ಆ ಗೀತೆಯ ಆಶಯದಂತೆ ನಾವು ಬದುಕ ಬೇಕಾಗಿದೆ. ಕುವೆಂಪು ಅದಂತೆ ಮನುಷ್ಯ ವಿಶ್ವ ಮಾನವನಾಗಿ ಹುಟ್ಟುತ್ತಾನೆ ಬಳಿಕ ಸ್ವಾಥರ್ಪರವಾದ ಬದುಕಿನಿಂದ ಅಲ್ಪ ಮಾನವನಾಗುತ್ತಾನೆ ಎನ್ನುತ್ತಾರೆ. ಅವರು ಬರೆದ ನಾಡ ಗೀತೆಯಲ್ಲಿ ಅವರು ಹೇಳಿದಂತೆ ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಬೇಕಾಗಿತ್ತು. ಈ ಆಶಯವನ್ನು ಅರ್ಥಮಾಡಿಕೊಳ್ಳದೆ ಹೋದರೆ, ಇನ್ನೊಬ್ಬರನ್ನು ದ್ವೇಷಿಸುವ ಬದಲು ಪ್ರೀತಿಸುವುದನ್ನು ಕಲಿಯದಿದ್ದರೆ ಬದುಕು ನಿರರ್ಥಕ, ಶಿಕ್ಷಣ ನಮ್ಮ ಬುದ್ಧಿಯನ್ನು, ಜ್ಞಾನವನ್ನು ವಿಕಸನ ಮಾಡುತ್ತದೆ. ನಾವು ಸ್ವಾಭಿಮಾನಿಗಳಾಗಿ, ಉತ್ತಮ ಮನುಷ್ಯರಾಗಿ ಬದುಕುವಂತೆ ಮಾಡಬೇಕು. ನಮ್ಮ ನಡವಳಿಕೆ, ಗುಣಗಳಿಂದ ನಾವು ವಿಶ್ವ ಮಾನವರಾಗ ಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ:- ದೇಶದ ಸಂವಿಧಾನವನ್ನು ಬದಿಲಾಯಿಸಲು ನಾವು ಆಯ್ಕೆಯಾಗಿರುವುದು ಎನ್ನುವ ಸಂಸದರಿಂದ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಜಾತ್ಯತೀತ ವ್ಯವಸ್ಥೆಗೆ ಅಪಾಯ ಒದಗಲಿದೆ. ಬಿಜೆಪಿಯ ಈ ಕೋಮುವಾದಿ ರಾಜಕಾರವನ್ನು ಕೊನೆಗೊಳಿಸಲು ಈ ದೇಶದ ಪ್ರಜ್ಞಾವಂತ ಜನರು ಅವರನ್ನು ಅಧಿಕಾರಕ್ಕೆ ಏರದಂತೆ ನೋಡಿಕೊಳ್ಳಬೇಕು ಎಂದು ತಾನು ಮನವಿ ಮಾಡಿಕೊಳ್ಳುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ವಸಂತ ಬಂಗೇರ ನೇರ ನಡೆ ನುಡಿಯ ವಿಶ್ವಾಸಾರ್ಹ ಸ್ವಚ್ಛ, ಪ್ರಾಮಾಣಿಕ ರಾಜಕಾರಣಿ :- ವಸಂತ ಬಂಗೇರ ನೇರ ನಡೆ ನುಡಿಯ ವಿಶ್ವಾಸಾರ್ಹ ಸ್ವಚ್ಛ, ಪ್ರಾಮಾಣಿಕ ರಾಜಕಾರಣಿ ಅವರು ಯಾವಾಗಲೂ ತಮ್ಮ ಕ್ಷೇತ್ರದ ಕೆಲಸ ಬಿಟ್ಟು ಬೇರೆ ಕೆಲಸ ಇಲ್ಲ. ಅವರು ಜನತೆಯ ದೊಡ್ಡ ಆಸ್ತಿ ಸಚಿವರಾಗ ಬೇಕಾಗಿತ್ತು. ಮುಂದೆಯೂ ಅವಕಾಶವಿದೆ ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಎಂದರು. ಅವರು ಅಭಿವೃದ್ಧಿಗಾಗಿ ಅವರ ಕೋರಿಕೆಯಂತೆ 100 ಕೋಟಿ ರೂ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಸಂತ ಬಂಗೇರಾ ಮಾತನಾಡುತ್ತಾ, ರಾಮಕೃಷ್ಣ ಹೆಗಡೆಯ ಬಳಿಕ ರಾಜ್ಯದ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಬಡವರಿಗೆ ಗರಿಷ್ಠ ಯೋಜನೆಗಳ ಮೂಲಕ ಸಹಾಯ ನೀಡಿದ್ದಾರೆ. ಜಿಲ್ಲೆಯಲ್ಲಿ ಕುಮ್ಕಿ ಹಕ್ಕುದಾರರಿಗೆ ಭೂಮಿಯ ಹಕ್ಕು, ಅಕ್ರಮ ಸಕ್ರಮದಲ್ಲಿ ಭೂಮಿಯ ಹಕ್ಕು, ಡಿ.ಸಿ ಮನ್ನಾ ಭೂಮಿಯ ನಿಜವಾದ ಫಲಾನುಭವಿಗಳಿಗೆ ಭೂಮಿಯ ಹಕ್ಕು ನೀಡಬೇಕಾಗಿದೆ. ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿಗೆ 500ಕೋಟಿ ರೂ. ಬೇಕಾಗಿದೆ ಕನಿಷ್ಟ 100 ಕೋಟಿ ರೂಪಾಯಿಯಾದರೂ ನೀಡಬೇಕು ಎಂದು ಮುಖ್ಯ ಮಂತ್ರಿಯ ಮುಂದೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡುತ್ತಾ, ರಾಜ್ಯ ಸರಕಾರ ದುರ್ಬಲರ ಶೋಷಿತರ, ರೈತರ, ನೊಂದವರ, ಮಹಿಳೆಯರ, ಕಾರ್ಮಿಕರ ಪರವಾಗಿರುವ ಸರಕಾರದ ಎಂದಂತೆ ನೀಡಿದ ಭರವಸೆ ಈಡೇರಿಸಿ ನುಡಿದಂತೆ ನಡೆದ ಸರಕಾರ ಎಂದು ಜನ ಜನಿತವಾಗಿದೆ. ಜಿಲ್ಲೆಗೆ ಪಶು ವೈದ್ಯಕೀಯ ಕಾಲೇಜು ಮಂಜೂರು ಮಾಡಿದ ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಸಂಕೀರ್ಣ ನಿರ್ಮಾಣಕ್ಕೂ ಅವಕಾಶ ನೀಡಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು ಉತ್ತಮ ಕಾರ್ಯನಿರ್ವಹಿಸಿ ಜಿಲ್ಲೆಗೆ ಅಭಿವೃದ್ಧಿ ಕೊಡುಗೆ ನೀಡಿದ್ದಾರೆ ಎಂದು ರಮಾನಾಥ ರೈ ತಿಳಿಸಿದರು.

ಸಮಾರಂಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆಯ ಸಚಿವ ಯು.ಟಿ.ಖಾದರ್, ಶಾಸಕ ಪ್ರತಾಪ್ ಚಂದ್ರ ಶೆಟ್ಟಿ, ಮುಖ್ಯ ಸಚೇತಕ ಐವನ್ ಡಿ ಸೋಜ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ವಸಂತ ಬಂಗೇರರ ಪತ್ನಿ ಸುಜಾತ ಬಂಗೇರ, ತಾಲೂಕು ಪಂಚಾಯತ್ ಅಧ್ಯಕ್ಷ ದಿವ್ಯಾಜ್ಯೋತಿ, ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ, ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ, ಶಾಹುಲ್ ಹಮೀದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಧರಣೇಂದ್ರ ಕುಮಾರ್, ತುಳು ಅಕಾಡಮಿಯ ಎ.ಸಿ.ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News