ಕೊಣಾಜೆ: ಸ್ವಚ್ಛತೆಗಾಗಿ ಕಾಲ್ನಡಿಗೆ ಜಾಥಾ
ಕೊಣಾಜೆ, ಜ.7: ಕೊಣಾಜೆ ಗ್ರಾಪಂ ಹಾಗೂ ಕೊಣಾಜೆಪದವು ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನಮ್ಮ ತ್ಯಾಜ್ಯ ನಮ್ಮ ಹೊಣೆ, ನಮ್ಮ ಗ್ರಾಮ ಸ್ವಚ್ಚ ಗ್ರಾಮ ಎಂಬ ಕಲ್ಪನೆಯೊಂದಿಗೆ ಸ್ವಚ್ಛತೆಯ ಬಗ್ಗೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮವು ಶನಿವಾರ ಕೊಣಾಜೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮಾತನಾಡಿ, ಸ್ವಚ್ಛತೆಯ ಬಗ್ಗೆ ಈಗಾಗಲೇ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಬ್ಬರ ಮನೆ ಮನದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿದರೆ ಆರೋಗ್ಯಕರ ಸಮಾಜವಾಗಿ ರೂಪುಗೊಳ್ಳಲಿದೆ ಎಂದರು.
ಕೊಣಾಜೆ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ ಮಾತನಾಡಿ, ಕೊಣಾಜೆ ಗ್ರಾಮದಲ್ಲಿ ಈಗಾಗಲೇ ಸ್ವಚ್ಚತೆಯ ಬಗ್ಗೆ ಹಲವಾರು ಯೋಜನೆಯ ಮೂಲಕ ಜಾಗೃತಿ ಮೂಡಿಸಲಾಗಿದೆ. ಪ್ರತೀ ಮನೆ ಮನೆಯಿಂದ ಕಸಗಳನ್ನು ವಾಹನದ ಮೂಲಕ ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಗ್ರಾಮದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿದೆ. ಅಲ್ಲದೆ ಇಂತಹ ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ಆಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಎಸ್. ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ, ತಾಪಂ ಸದಸ್ಯೆ ಪದ್ಮಾವತಿ ಪೂಜಾರಿ, ಪಂಚಾಯತ್ ಸದಸ್ಯರಾದ ಅಚ್ಯುತ ಗಟ್ಟಿ, ಅಬ್ದುಲ್ ಖಾದರ್, ಸಿ.ಎಂ.ಮುಹಮ್ಮದ್, ಗೋಪಿಕಾ, ವೇದಾವತಿ ಗಟ್ಟಿ, ಗಣೇಶ್, ಶೋಭಾ, ಕೊಣಾಜೆ ಪದವು ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾ ಗಾಂವ್ಕರ್, ಶಿಕ್ಷಕ ರಾಜೀವ ನಾಯ್ಕ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.