×
Ad

ಬಶೀರ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲು ಸಂಸದ ನಳಿನ್ ಒತ್ತಾಯ

Update: 2018-01-07 21:30 IST

ಉಡುಪಿ, ಜ.7: ಮಂಗಳೂರು ಕೊಟ್ಟಾರಚೌಕಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ಬಶೀರ್ ಕುಟುಂಬಕ್ಕೆ ರಾಜ್ಯ ಸರಕಾರ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಹತ್ಯೆಗಳು ನಿರಂತರ ನಡೆಯುತ್ತಿದ್ದು, ಈ ರೀತಿಯ ಮತಾಂಧರ ಹತ್ಯೆ ಖಂಡನೀಯ. ಯಾವುದೇ ಧ್ವೇಷ ಇದ್ದರೂ ಕಾನೂನು ಕೈಗೆತ್ತಿಕೊಂಡು ಒಬ್ಬ ವ್ಯಕ್ತಿಯನ್ನು ಹತ್ಯೆಗೈಯ್ಯುವ ಹಕ್ಕು ಯಾರಿಗೂ ಇಲ್ಲ ಎಂದರು.

ಸಿದ್ದರಾಮಯ್ಯ ಸರಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೊಲೆ, ಹತ್ಯೆ ನಡೆಸುವವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ಸಭೆ ಕರೆದು ಎಲ್ಲಾ ಪ್ರಕರಣಗಳ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ತಿಳಿಸಿದರು.

ಕರಾವಳಿಯಲ್ಲಿ ಡ್ರಗ್ಸ್ ಮಾಫಿಯಾದ ಹಾವಳಿ ವ್ಯಾಪಕವಾಗಿದ್ದು, ಪಂಜಾಬ್ ರಾಜ್ಯವನ್ನು ಮೀರಿಸುವಂತೆ ಬೆಳೆಯುತ್ತಿದೆ. ಪ್ರತಿಯೊಂದು ಕಡೆಗಳಲ್ಲಿ ಮಾದಕ ದ್ರವ್ಯಗಳು ಯುವಕರಿಗೆ ಸುಲಭವಾಗಿ ದೊರೆಯುತ್ತಿದೆ. ಇದರಿಂದಾಗಿಯೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ರಘಪತಿ ಭಟ್, ಬಿಜೆಪಿ ಮುಖಂಡರಾದ ಯಶ್‌ಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ಶ್ಯಾಮಲ ಕುಂದರ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಪ್ರವೀಣ್ ಕಪ್ಪೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News