×
Ad

ಮೋದಿ ಜಾದು ಕರ್ನಾಟಕದಲ್ಲಿ ನಡೆಯೋಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-01-07 22:39 IST

ಮಂಗಳೂರು, ಜ.7: ಕರ್ನಾಟಕ ಸೂಫಿ-ಸಂತರ ನಾಡು. ಇಲ್ಲಿನ ಜಾತ್ಯತೀತ ಮನಸ್ಸು ಗಟ್ಟಿಯಾಗಿದೆ. ಮನ್‌ಕಿ ಬಾತ್‌ಗಿಂತ ಕಾಮ್‌ಕಿ ಬಾತ್ ಅನ್ನು ಇಲ್ಲಿನ ಜನತೆ ನೆಚ್ಚಿಕೊಂಡಿದ್ದಾರೆ. ರಾಜ್ಯದಲ್ಲಿ ವಿವಿಧ ಯೋಜನೆಯಡಿ ಹಮ್ಮಿಕೊಂಡ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯ ಯಾವ ಜಾದು, ಮಂತ್ರ ಕರ್ನಾಟಕದಲ್ಲಿ ನಡೆಯೋಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ರವಿವಾರ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಹೊಸ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಕರ್ನಾಟಕವನ್ನು ನಂ.1 ಮಾಡುವುದು ನಮ್ಮ ಕನಸಾಗಿದೆ. ಅದಕ್ಕಾಗಿ ನವ ಕರ್ನಾಟಕ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಆ ನನಸು ಮಾಡಲು ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಹಸಿವು ಮುಕ್ತ, ಗುಡಿಸಲು ಮುಕ್ತ, ಬರಮುಕ್ತ, ಋಣಮಕ್ತ ಕರ್ನಾಟಕ ನಿರ್ಮಾಣದ ಗುರಿ ನಮ್ಮದಾಗಿದೆ. ಈ ರಾಜ್ಯವನ್ನು ಲೂಟಿಗೈದು ಜೈಲು ಸೇರಿದ ಯಡಿಯೂರಪ್ಪ ಸಹಿತ ಬಿಜೆಪಿಗರು ನಂಬಿಕೆಗೆ ಅರ್ಹರಲ್ಲ. ಅವರು ಮತ್ತೆ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವ ಹೊಣೆ ನಿಮ್ಮದು ಎಂದು ಸಿದ್ದರಾಮಯ್ಯ ಹೇಳಿದರು.

ವಿಪಕ್ಷಗಳಿಗೆ ಸರಕಾರದ ಸಾಧನೆಯ ಬಗ್ಗೆ ಚೆನ್ನಾಗಿ ತಿಳಿದಿದೆ. ಆದರೆ, ಅದನ್ನು ಒಪ್ಪಿಕೊಳ್ಳದೆ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯ ಪರಿವರ್ತನಾ ಯಾತ್ರೆಯ ಸಂದರ್ಭ ಸಿದ್ದರಾಮಯ್ಯರ ಹಗರಣವನ್ನು ದಿನಕ್ಕೊಂದರಂತೆ ಬಯಲಿಗೆಳೆಯುವೆ ಎಂದಿದ್ದ ಯಡಿಯೂರಪ್ಪ ಪುಂಗಿ ಊದಿದ್ದೇ ಬಂತು. ಪರಿವರ್ತನಾ ಯಾತ್ರೆ ಮುಗಿಸಿ ಒಂದುವರೆ ತಿಂಗಳಾದರೂ ಏನೂ ಆಗಿಲ್ಲ. ಆ ಮೂಲಕ ಹಾಲಿ ಸರಕಾರ ಹಗರಣ ಮುಕ್ತ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.

ಸಂವಿಧಾನದಲ್ಲಿ ನಂಬಿಕೆ ಇಲ್ಲದ, ಸುಳ್ಳನ್ನೇ ಮನೆದೇವರು ಮಾಡಿಕೊಂಡಿರುವ ಬಿಜೆಪಿಯವರಿಗೆ ಮೂರುಕಾಸಿನ ಬೆಲೆ ಇಲ್ಲ. ಮಾತನಾಡಿದರೆ ಬೆಂಕಿ ಹಾಕುವೆ ಎನ್ನುತ್ತಾರೆ. ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಗೆ ಸಂಸದ, ಸಚಿವನಾಗಲು ಬಿಡಿ, ಗ್ರಾಪಂ ಸದಸ್ಯನಾಗಲೂ ಅರ್ಹತೆ ಇಲ್ಲ.ಇಂತಹವರನ್ನು ಶಾಶ್ವತವಾಗಿ ಮನೆಗೆ ಕಳುಹಿಸಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ ಶಾಸಕ ಅಭಯಚಂದ್ರ ಜೈನ್ ತನ್ನನ್ನು ಸಚಿವ ಸ್ಥಾನ ಮಾಡಿದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಸಂತಸದ ಕಣ್ಣೀರಿಳಿಸಿದರು.

ವೇದಿಕೆಯಲ್ಲಿ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಚಿವ ಯು.ಟಿ.ಖಾದರ್, ಶಾಸಕ ಬಿ.ಎ.ಮೊಯ್ದಿನ್ ಬಾವಾ, ಐವನ್ ಡಿಸೋಜ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್, ಮಿಜಾರುಗುತ್ತು ಆನಂದ ಆಳ್ವ, ಡಾ.ಎಂ.ಮೋಹನ್ ಆಳ್ವ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಎಂ.ಎ.ಪ್ರಸಾದ್, ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮತ್ತಿತರರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು.

ಜಿಲ್ಲೆಯಲ್ಲಿ ಶಾಂತಿ-ಸೌಹಾರ್ದಕ್ಕಾಗಿ ಕಾಲ್ನಡಿಗೆ ಜಾಥಾ ನಡೆಸಿದರೂ ಕೂಡ ಕಳೆದ ಕೆಲವು ದಿನದಿಂದ ಮತ್ತೆ ಅಶಾಂತಿ ಸೃಷ್ಟಿಯಾಗಿದೆ. ಜಾಥಾದ ಬಳಿಕವೂ ಇಬ್ಬರ ಹತ್ಯೆಯಾದುದು ನನ್ನ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನುಡಿದರು.
ಇತ್ತೀಚೆಗೆ ಹತ್ಯೆಗೀಡಾದ ದೀಪಕ್ ರಾವ್ ಹಾಗೂ ಬಶೀರ್ ಅವರಿಗೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು.

ಅಭಯರಿಗೆ ಟಿಕೆಟ್: ಶಾಸಕ ಅಭಯಚಂದ್ರ ಜೈನ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದರು. ನಾನವರ ಮನ ಒಲಿಸಿದ್ದು, ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷ ಅವರಿಗೇ ಟಿಕೆಟ್ ನೀಡಲಿದೆ. ಆ ಬಗ್ಗೆ ನಾನು ಹೈಕಮಾಂಡ್‌ಗೆ ಶಿಫಾರಸು ಮಾಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡುವುದರೊಂದಿಗೆ ಮೂಡುಬಿದಿರೆ ಕ್ಷೇತ್ರದ ಟಿಕೆಟ್‌ಗಾಗಿ ಪೈಪೋಟಿ ನಡೆಸುವ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮತ್ತು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯ ಆಸೆಗೆ ತಣ್ಣೀರೆರಚಿದ್ದಾರೆ.

ಉದ್ಘಾಟನೆ

ಮೂಡುಬಿದಿರೆ ಸ್ವರಾಜ್ ಮೈದಾನದ ಬಳಿ ರಿಂಗ್ ರೋಡ್, ಮೂಡಬಿದಿರೆಯಿಂದ ಶಿರ್ತಾಡಿ ರಸ್ತೆ ಅಭಿವೃದ್ಧಿ ಉದ್ಘಾಟನೆ, ಕುಪ್ಪೆಪದವು-ಇರುವೈಲು- ಮೂಡುಬಿದಿರೆ ಜಿಲ್ಲಾ ಮುಖ್ಯ ರಸ್ತೆಯ ಅಗಲೀಕರಣ ಉದ್ಘಾಟನೆ, ಬೆಳ್ತಂಗಡಿ-ಮೂಡಬಿದಿರೆ-ಮುಲ್ಕಿ ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಉದ್ಘಾಟನೆ, ಬೆಳ್ತಂಗಡಿ-ಮೂಡುಬಿದಿರೆ-ಮುಲ್ಕಿ ರಾಜ್ಯ ಹೆದ್ದಾರಿಯಲ್ಲಿ ಗಂಟಾಲ್‌ಕಟ್ಟೆಯಿಂದ ಮೂಡುಬಿದಿರೆವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಉದ್ಘಾಟನೆ, ಬೆಳುವಾಯಿ ಅಳಿಯೂರು ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ಉದ್ಘಾಟನೆ, ಬೈಲುಕೊಪ್ಪದಿಂದ ನಡಿಗುಡ್ಡೆ ರಸ್ತೆ ಅಭಿವೃದ್ಧಿ ಉದ್ಘಾಟನೆ, ಮಳವೂರು ಗ್ರಾಪಂನ ಹಳೆ ವಿಮಾನ ನಿಲ್ದಾಣದಿಂದ ಹೊಸ ವಿಮಾನ ನಿಲ್ದಾಣದ ಅಗ್ನಿಶಾಮಕ ತುರ್ತು ನಿರ್ಗಮನ ರಸ್ತೆ ಅಭಿವೃದ್ಧಿ ಉದ್ಘಾಟನೆ, ಹೊಸಬೆಟ್ಟು ಚರ್ಚ್ ಬಾವದಬೈಲ್‌ನಿಂದ ಪುಚ್ಚಮೊಗರು ರಸ್ತೆ ಅಭಿವೃದ್ಧಿ ಉದ್ಘಾಟನೆ, ಇರ್ವತ್ತೂರಿನಿಂದ ಮೂಡೆಕಾಡು ರಸ್ತೆ ಅಭಿವೃದ್ಧಿ ಉದ್ಘಾಟನೆ, ಇರುವೈಲು ಗ್ರಾಪಂ ಹೊಸ್ಮಾರು-ಪದವು ರಸ್ತೆ ಅಭಿವೃದ್ಧಿ ಉದ್ಘಾಟನೆ, ಕಾಪಿಜಾಲ್ ಪರಿಶಿಷ್ಟ ಜಾತಿ ಕಾಲನಿಯಿಂದ ಆನೆಗುಡ್ಡೆ ಚರ್ಚ್ ರಸ್ತೆ ಅಭಿವೃದ್ಧಿ ಉದ್ಘಾಟನೆ, ಹಿದಾಯತ್ ನಗರದಿಂದ ತೋಡಾರು ಜಂಕ್ಷನ್‌ವರೆಗೆ ರಸ್ತೆ ಅಭಿವೃದ್ಧಿ ಉದ್ಘಾಟನೆ, ನಡ್ಯೋಡಿಯಿಂದ ಮರ್ಕೋತ್ತಪಲ್ಕೆ ರಸ್ತೆ ಅಭಿವೃದ್ಧಿ ಉದ್ಘಾಟನೆ, ಮೂಡುಬಿದಿರೆ ಮೆಸ್ಕಾಂ ಉಪವಿಭಾಗ ಕಚೇರಿ ಉದ್ಘಾಟನೆ, ಮೂಡಬಿದ್ರೆ ಪುರಸಭಾ ವ್ಯಾಪ್ತಿಯ ಬಸದಿ ಕೆರೆ ನವೀಕರಣ ಕಾಮಗಾರಿ ಉದ್ಘಾಟನೆ, ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಾಂಧಿಪಾರ್ಕ್ ಎಂಬಲ್ಲಿ ಹೊಸ ಸ್ಕೇಟಿಂಗ್ ರಿಂಕ್ ಉದ್ಘಾಟನೆ.

ಶಿಲಾನ್ಯಾಸ

ಮುಲ್ಕಿ ಪಟ್ಟಣ ಪಂಚಾಯತ್ ಸಮಗ್ರ ಕುಡಿಯುವ ನೀರಿನ ಪೂರೈಕೆ ಉನ್ನತೀಕರಣ ಕಾಮಗಾರಿಗೆ ಶಿಲಾನ್ಯಾಸ, ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ 3ನೆ ಹಂತದ ಕಾಮಗಾರಿಗಳಿಗೆ ಶಿಲಾನ್ಯಾಸ, ಶಿರ್ತಾಡಿಯಿಂದ ಹೊಸ್ಮಾರುವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಶಿಲಾನ್ಯಾಸ, ಗ್ರಾಮ ವಿಕಾಸ ಯೋಜನೆಯಡಿ ಕಡಂದಲೆ, ಬಡಗಮಿಜಾರು, ತಾಳಿಪಾಡಿ ಮತ್ತು ಜೋಕಟ್ಟೆ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಪಿಲಿಕುಲ ನಿಸರ್ಗ ಧಾಮದೊಳಗೆ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ, ಕೆಮ್ರಾಲ್ ಗ್ರಾಪಂ ವ್ಯಾಪ್ತಿಯ ಪಂಜದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ, ಮೂಡುಬಿದಿರೆ ಸಾವಿರ ಕಂಬದ ಬಸದಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ, ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಕಂಚಿಬೈಲು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ, ಮಕ್ಕಿ ಮಾಂಟ್ರಾಡಿ ರಸ್ತೆ ಮತ್ತು ಸೇತುವೆ ಅಭಿವೃದ್ಧಿಗೆ ಶಿಲಾನ್ಯಾಸ, ಶಿರ್ತಾಡಿ ಮಾಂಟ್ರಾಡಿ ಗ್ರಾಮೀಣ ರಸ್ತೆಯ ಅಭಿವೃದ್ಧಿ ಶಿಲಾನ್ಯಾಸ, ಇರುವೈಲ್ ಬರ್ದಿಲ ಕಂಡೊಟ್ಟು ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ, ಧರೆಗುಡ್ಡೆ ಉರಿಯಾಲ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ, ಮೂಡುಬಿದಿರೆಯಲ್ಲಿ ಹೊಸ ರೈತ ಸಂಪರ್ಕ ಕೇಂದ್ರಕ್ಕೆ ಶಿಲಾನ್ಯಾಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News