×
Ad

ಸಮುದ್ರದಲ್ಲಿ ಸರಕು ಹಡಗುಗಳು ಢಿಕ್ಕಿ: 32 ಮಂದಿ ನಾಪತ್ತೆ

Update: 2018-01-07 22:40 IST

ಬೀಜಿಂಗ್, ಜ. 7: ಪೂರ್ವ ಚೀನಾದ ಕರಾವಳಿಯಲ್ಲಿ ತೈಲ ಟ್ಯಾಂಕರೊಂದು (ಹಡಗು) ಸರಕು ಹಡಗೊಂದಕ್ಕೆ ಢಿಕ್ಕಿಯಾಗಿದ್ದು, 32 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾದ ಸಾರಿಗೆ ಸಚಿವಾಲಯ ತಿಳಿಸಿದೆ. ನಾಪತ್ತೆಯಾದವರ ಪೈಕಿ ಹೆಚ್ಚಿನವರು ಇರಾನಿಯನ್ನರು.

ಶನಿವಾರ ರಾತ್ರಿ ಸರಕು ಹಡಗಿಗೆ ಢಿಕ್ಕಿಯಾದ ಬಳಿಕ, 1,36,000 ಟನ್ ತೈಲವನ್ನು ಒಯ್ಯುತ್ತಿದ್ದ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿತು. ಬಳಿಕ, ಅದರ ಸಿಬ್ಬಂದಿಯಾಗಿದ್ದ 30 ಇರಾನಿಯನ್ನರು ಮತ್ತು ಇಬ್ಬರು ಬಾಂಗ್ಲಾದೇಶೀಯರು ನಾಪತ್ತೆಯಾಗಿದ್ದಾರೆ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸರಕು ಹಡಗು ಕೂಡ ಢಿಕ್ಕಿಯಲ್ಲಿ ಹಾನಿಗೀಡಾಗಿದೆ. ಆದರೆ, ಈ ಹಾನಿಯು ಅದರ ಸುರಕ್ಷತೆಗೆ ಬೆದರಿಕೆಯಾಗಿಲ್ಲ. ಅದರ ಎಲ್ಲ 21 ಚೀನೀ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಅದು ಹೇಳಿದೆ.

ತೈಲ ಟ್ಯಾಂಕರ್‌ನಲ್ಲಿ ರವಿವಾರವೂ ಬೆಂಕಿ ಉರಿಯುತ್ತಿತ್ತು.

274 ಮೀಟರ್ ಉದ್ದದ ಇರಾನ್‌ನ ಗ್ಲೋರಿ ಶಿಪ್ಪಿಂಗ್‌ಗೆ ಸೇರಿದ ತೈಲ ಟ್ಯಾಂಕರ್ ತೈಲ ಹೊತ್ತುಕೊಂಡು ದಕ್ಷಿಣ ಕೊರಿಯದತ್ತ ಪ್ರಯಾಣಿಸುತ್ತಿತ್ತು.

ಹಾಂಕಾಂಗ್‌ಗೆ ಸೇರಿದ ಇನ್ನೊಂದು ಸರಕು ಹಡಗು 64,000 ಟನ್ ಧಾನ್ಯವನ್ನು ಸಾಗಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News