ಪಾಕ್ ರಾಯಭಾರಿ ಮರುನೇಮಕ ಸುದ್ದಿ ನಿರಾಕರಿಸಿದ ಫೆಲೆಸ್ತೀನ್
ಹೊಸದಿಲ್ಲಿ, ಜ.7: 26/11ರ ಮುಂಬೈ ದಾಳಿಯ ಸಂಚುಕೋರ ಹಾಫೀಝ್ ಸಯೀದ್ ಜೊತೆ ವೇದಿಕೆ ಹಂಚಿಕೊಂಡ ಆರೋಪದಲ್ಲಿ ವಾಪಸ್ ಕರೆಸಿಕೊಳ್ಳಲಾಗಿರುವ ಪಾಕಿಸ್ತಾನ ರಾಯಭಾರಿಯನ್ನು ಮರುನೇಮಕ ಮಾಡಿರುವ ವರದಿಯನ್ನು ಫೆಲೆಸ್ತೀನ್ ನಿರಾಕರಿಸಿದೆ.
ಪಾಕಿಸ್ತಾನದ ಮಾಧ್ಯಮ ಮಾಡಿರುವ ವರದಿಯನ್ನು ನಾವು ನಿರಾಕರಿಸುತ್ತೇವೆ. ಪಾಕಿಸ್ತಾನದಲ್ಲಿದ್ದ ನಮ್ಮ ರಾಯಭಾರಿ ಯನ್ನು ವಾಪಸ್ ಕರೆಸಿಕೊಳ್ಳಲಾಗಿದ್ದು ಅವರನ್ನು ಮರುನೇಮಕ ಮಾಡಿಲ್ಲ. ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಕಳೆದ ವಾರವೇ ನೀಡಲಾಗಿದೆ ಎಂದು ಫೆಲೆಸ್ತೀನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಫೆಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಅವರು ಪಾಕಿಸ್ತಾನದ ರಾಯಭಾರಿ ವಾಲಿದ್ ಅಬು ಅಲಿಯವರನ್ನು ಮರುನೇಮಿಸಿರುವುದಾಗಿ ಪಾಕಿಸ್ತಾನ ಉಲೇಮಾ ಮಂಡಳಿಯ ಮುಖ್ಯಸ್ಥರಾದ ವೌಲಾನಾ ತಶಿರ್ ಅಶ್ರಫಿ ತಿಳಿಸಿದ್ದಾರೆ ಎಂದು ಪಾಕಿಸ್ತಾನದ ಮೂಲಕ ಜಿಯೋ ನ್ಯೂಸ್ ವರದಿ ಮಾಡಿತ್ತು.
ಪಾಕಿಸ್ತಾನದಲ್ಲಿ ಹಾಫೀಝ್ ಸಯೀದ್ ಜೊತೆ ಅಬು ಅಲಿ ವೇದಿಕೆ ಹಂಚಿರುವುದಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಭಾರತ ಇದು ಸ್ವೀಕಾರಾರ್ಹವಲ್ಲ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಫೆಲೆಸ್ತೀನ್ ವಿದೇಶಾಂಗ ಸಚಿವಾಲಯ ಡಿಸೆಂಬರ್ 30ರಂದು ಅಲಿಯವರನ್ನು ಪಾಕಿಸ್ತಾನದಿಂದ ವಾಪಸ್ ಕರೆಸಿತ್ತು. ಈ ಬಗ್ಗೆ ಹೇಳಿಕೆ ನೀಡಿದ ಫೆಲೆಸ್ತೀನ್ ಭಯೋತ್ಪಾದನೆಯ ಆರೋಪವನ್ನು ಹೊತ್ತಿರುವ ವ್ಯಕ್ತಿಯ ಜೊತೆ ನಮ್ಮ ರಾಯಭಾರಿ ವೇದಿಕೆ ಹಂಚಿಕೊಂಡಿರುವುದು ಅನಪೇಕ್ಷಿತ ತಪ್ಪಾಗಿದ್ದರೂ ಒಪ್ಪುವಂಥದ್ದಲ್ಲ ಎಂದು ತಿಳಿಸಿತ್ತು. ಭಯೋತ್ಪಾದನೆ ಜೊತೆಗಿನ ಹೋರಾಟದಲ್ಲಿ ಫೆಲೆಸ್ತೀನ್ ಭಾರತದ ನಿಜವಾದ ಜೊತೆಗಾರನಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿತ್ತು.