×
Ad

ಮುಂದಿನ ಚುನಾವಣೆಯ ಅಭ್ಯರ್ಥಿಗಳ ಅಂತಿಮ ಆಯ್ಕೆ ಹೈಕಮಾಂಡ್‌ಗೆ: ಸಿದ್ದರಾಮಯ್ಯ

Update: 2018-01-08 17:59 IST

ಮಂಗಳೂರು, ಜ. 8: ಮುಂದಿನ ಚುನಾವಣೆಯ ಅಭ್ಯರ್ಥಿಗಳ ಅಂತಿಮ ಆಯ್ಕೆ ಹೈಕಮಾಂಡ್ ನಡೆಸಲಿದೆ ಎಂದು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ದ.ಕ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದು, ಇಂದು ಮುಂಜಾನೆ ತಮ್ಮನ್ನು ಭೇಟಿ ಮಾಡಿದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಐವನ್ ಡಿ ಸೋಜ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ರಾಜ್ಯದ ವಿವಿಧ ಕಡೆಗಳಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನಡೆಸಿದ ಸಾಧನಾ ಸಮಾವೇಶಕ್ಕೆ ಉತ್ತಮವಾದ ಪ್ರತಿಕ್ರಿಯೆ ದೊರೆತಿದೆ. ನಾನು ಯಾರನ್ನು ಮುಂದಿನ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವರನ್ನು ಶಾಸಕರನ್ನು ಬೆಂಬಲಿಸಿ, ಫೋತ್ಸಾಹಿಸಿ ಮಾತನಾಡಿದ್ದೇನೆ. ಅವರನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸಿದ್ದರಾಮಯ್ಯನವರ ವಾಸ್ತವ್ಯ, ಬಿಡುವಿಲ್ಲದ ಕಾರ್ಯಕ್ರಮ:- ಮಂಗಳೂರಿಗೆ ರವಿವಾರ ಬೆಳಗ್ಗೆ ಆಗಮಿಸಿದ ಸಿದ್ದರಾಮಯ್ಯ ಮರುದಿನ ಬೆಳಗ್ಗಿನ ವರೆಗೆ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್, ಬಶೀರ್‌ರವರ ಮನೆಗೆ ಭೇಟಿ ನೀಡಿ ರಾತ್ರಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕದ್ರಿಯಲ್ಲಿ ಸಂಗೀತ ಕಾರಂಜಿ ಉದ್ಘಾಟಿಸಿ ನಂತರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದರು.

ಮುಂಜಾನೆ 8 ಗಂಟೆಯಿಂದಲೇ ತಮ್ಮ ಬಳಿಗೆ ಬಂದ ಕಾರ್ಯಕರ್ತರು, ಅಧಿಕಾರಿಗಳು, ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು. ಕೆಲವರ ಅಹವಾಲು ಸ್ವೀಕರಿಸಿದರು. 10 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ.ಎ. ಮೊಹಿದಿನ್‌ರನ್ನು ಭೇಟಿ ಮಾಡಿ ಮಾತನಾಡಿದರು.10:25ಕ್ಕೆ ವಲೆನ್ಸಿಯಾದಲ್ಲಿರುವ ಕರ್ನಾಟಕ ಸರಕಾರದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ ಸೋಜ ಅವರ ನಿವಾಸಕ್ಕೆ ಭೇಟಿ ನೀಡಿ, ಬೆಳಗ್ಗಿನ ಉಪಹಾರ ಸೇವಿಸಿದರು. ಬೆ.11:15ಕ್ಕೆ ಮಂಗಳೂರು ವಿಮಾನ ನಿಲ್ದಾಣದ ಬಳಿ ಹೆಲಿಕಾಪ್ಟರ್ ಮೂಲಕ ಬೈಂದೂರಿಗೆ ತೆರಳಿದ್ದಾರೆ. 

ಸರಳ ಊಟ, ಉಪಹಾರ ಸ್ವೀಕರಿಸಿದ ಸಿದ್ದರಾಮಯ್ಯ: ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕೋಳಿ, ಮೀನು ತರಕಾರಿ ಊಟದ ವ್ಯವಸ್ಥೆ ಮಾಡಿದ್ದರೂ ಸಿದ್ದರಾಮಯ್ಯ ಕುಚ್ಚಲಕ್ಕಿಯ ಅನ್ನ ಸಂಬಾರಿನೊಂದಿಗೆ ಸರಳ ಊಟ ಮುಗಿಸಿದ್ದಾರೆ.

ಬೆಳಗ್ಗೆ ಐವನ್ ಡಿ ಸೋಜ ಅವರ ಮನೆಯಲ್ಲಿ ನೀರ್ ದೋಸೆ, ಮೂಡೆ, ಮಂಗಳೂರು ಚಿಕನ್ ಸಾರು, ರಾಗಿ ಮುದ್ದೆ, ಮೊಸರು ವಡೆ, ಉಪ್ಪಿಟ್ಟು, ರಾಗಿ ಮುದ್ದೆ, ಸಾಂಬಾರು, ಅವಲಕ್ಕಿ ಹಣ್ಣು, ಕಾಫಿ, ಚಹಾದ ವ್ಯವಸ್ಥೆ ಮಾಡಲಾಗಿತ್ತು.

ನ್ಯಾಯವಾದಿ ದಿನೇಶ್ ಹೆಗ್ಡೆ ಪಿಲಿಕುಳದಲ್ಲಿ ವಿದ್ಯಾರ್ಥಿಗಳ ಮೇಲೆ ಇತ್ತೀಚೆಗೆ ನಡೆದಿರುವ ಗೂಂಡಾಗಿರಿಯ ವಿರುದ್ಧ ಕಾವೂರು ಠಾಣೆಗೆ ದೂರು ನೀಡಿದ್ದರೂ ಸಮರ್ಪಕವಾದ ತನಿಖೆ ನಡೆಯದಿರುವ ಬಗ್ಗೆ ಮತ್ತು ಪ್ರಕರಣದ ಬಗ್ಗೆ ಸಮಗ್ರ ತನಿಖೆಗಾಗಿ ಮಕ್ಕಳ ಹಕ್ಕುಗಳ ಬಗ್ಗೆ ತಿಳಿದಿರುವ ವ್ಯಕ್ತಿಗಳನ್ನೊಳಗೊಂಡ ವಿಶೇಷ ತಂಡದಿಂದ ತನಿಖೆ ನಡೆಸಬೇಕು. ಈ ಗೂಂಡಾಗಿರಿಯಿಂದ ಸಂತ್ರಸ್ತರದ ವಿದ್ಯಾರ್ಥಿಗಳಿಗೆ ತಲಾ 10 ಲಕ್ಷ ಪರಿಹಾರ ನೀಡ ಬೇಕು ಎಂದು ಇಂದು ಮುಖ್ಯ ಮಂತ್ರಿಯನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ಸಮಾಜಿಕ ಕಾರ್ಯಕರ್ತರು ಮತ್ತು ಮಾನವ ಹಕ್ಕು ಹೋರಾಟಗಾರರಾದ ವಿದ್ಯಾದಿನಕರ್, ರೆನ್ನಿ ಡಿ ಸೋಜ, ಬಾಲಕೃಷ್ಣ ರೈ ಸುನೀಲ್ ವಾಸ್‌ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News