ಬಂಟ್ವಾಳ: ಸಂವಿಧಾನ ಅವಹೇಳನ ವಿರುದ್ಧ ಕರ್ನಾಟಕ ರಾಜ್ಯ ದಲಿತ್ ಮಹಾಸಭಾ ವತಿಯಿಂದ ಪ್ರತಿಭಟನೆ
ಬಂಟ್ವಾಳ, ಜ. 8: ದೇಶದ ಸಂವಿಧಾನ ಪರಾಮರ್ಶೆ, ಸಂವಿಧಾನ ಅವಹೇಳನ ವಿರುದ್ಧ ಕರ್ನಾಟಕ ರಾಜ್ಯ ದಲಿತ್ ಮಹಾಸಭಾ ವತಿಯಿಂದ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
ದಲಿತ ಮುಖಂಡ ಬಾನುಚಂದ್ರ ಕೃಷ್ಣಾಪುರ ಪ್ರತಿಭನಕಾರರನ್ನು ಉದ್ದೇಶಿಸಿ ಮಾತನಾಡಿ, ನೀಚರ ಕೈಯಲ್ಲಿ ಸಂವಿಧಾನ ನಲುಗುತ್ತಿವೆ. ಮನುವಾದಿಗಳು ದೇಶದ ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಇದು ದೇಶ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದರು.
ಇದಕ್ಕು ಮೊದಲು ಸಂವಿಧಾನ ತಿದ್ದುಪಡಿಯಾಗಿವೆ. ಕಾಲಕ್ಕೆ ತಕ್ಕಂತೆ ಇನ್ನೂ ಸಾವಿರ ಸಲವಾದರೂ ತಿದ್ದುಪಡಿಯಾಗಲಿ. ಆದರೆ ಸಂವಿಧಾನವನ್ನು ಪರಾಮರ್ಶೆಗೊಳಿಸುವುದು ಖಂಡನೀಯ ಎಂದರು.
ಈ ಹಿಂದೆ ದಲಿತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಹಾಗೂ ಅನ್ಯಧರ್ಮದವರು ದಲಿತ ಪರವಾಗಿ ಧ್ವನಿಗೂಡಿಸುತ್ತಿದ್ದಾರೆ. ಈಗ ದಲಿತ ಸಮುದಾಯಕ್ಕೆ ಆನೆಬಲ ಬಂದತಾಗಿದೆ ಎಂದ ಅವರು, ದಲಿತರ ಮೇಲೆ ಅಕ್ರಮಣ ಮುಂದುವರಿದರೆ ಸಾಮಾಹಿಕವಾಗಿ ಮತಾಂತರವಾಗುವ ಬಗ್ಗೆ ಎಚ್ಚರಿಕೆ ನೀಡಿದರು.
ಎಸ್‌ಡಿಪಿಐ ಮುಖಂಡ ಹನೀಫ್ ಖಾನ್ ಕೊಡಾಜೆ ಮಾತನಾಡಿ, ಸಂವಿಧಾನ ವಿರೋಧಿ, ಶೇ.3ರಷ್ಟು ಜನರು ಈ ದೇಶವನ್ನು ಆಳುತ್ತಿದ್ದಾರೆ. ನಮಗೆ ಗೊತ್ತಿಲ್ಲದ ರೀತಿಯಲ್ಲಿ ನಮ್ಮನ್ನು ಗುಲಾಮರನ್ನಾಗಿ ಮಾಡಲಾಗಿದೆ. ಇದು ಮುಂದಿನ ಪೀಳಿಗೆಗೆ ಅಪಾಯಕಾರಿ ಎಂದ ಅವರು, ಟಿಪ್ಪು ಸುಲ್ತಾನ್ ವಿರೋಧಿಗಳೆ ಈಗ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ. ಸಂವಿಧಾನದ ರಕ್ಷಣೆ ಜೀವಕೊಡಲು ಸಿದ್ಧ ಎಂದು ಹೇಳಿದರು.
ಸಿಪಿಎಂ ಪ್ರಧಾನ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದ ಸಂಘಪರಿವಾರಕ್ಕೆ ಈ ದೇಶದ ಚರಿತ್ರೆಗೊತ್ತಿಲ್ಲ. ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಠಿಸಲು ಮುಂದಾಗಿರುವುದು ದುರದೃಷ್ಟಕರ. ಇದನ್ನು ಎಲ್ಲರು ವಿರೋಧಿಸಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ ಕುಕ್ಕೇಡಿ,ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರಿಂದ ಸಂವಿಧಾನದ ರಕ್ಷಣೆ ಅಸಾಧ್ಯ. ಇದಕ್ಕಾಗಿ ಎಲ್ಲ ಜಾತ್ಯತೀತ ಮನಸ್ಸುಗಳು ಒಂದಾಗುವ ಮೂಲಕ ರಕ್ಷಣೆಗೆ ಮುಂದಾಗಬೇಕು ಎಂದರು.
ವಸಂತಿ ಚಂದಪ್ಪ ಮಾತನಾಡಿ, ಸಂವಿಧಾನ ವಿರುದ್ಧ ಹೇಳಿಕೆ ನೀಡಿರುವ ಸ್ವಾಮೀಜಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ನಾವು ನಿಮ್ಮ ಪ್ರಕಾರ ಹಿಂದುಗಳು ಅಲ್ಲವೇ?. ಇಂತಹ ಹೇಳಿಕೆ ನೀಡಿರುವವರು ಸಂವಿಧಾನವನ್ನು ಒಂದು ಸಲನಾದರೂ ಓದಿ ಅರ್ಥೈಸಿಕೊಂಡರೆ ಒಳ್ಳೆಯದು ಎಂದರು.
ಈ ಸಂದರ್ಭ ಮಾತನಾಡಿದ ಭಾಷಣಕಾರರು, ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರಿಂದ ಸಂವಿಧಾನದ ವಿರುದ್ಧ ಹೇಳಿಕೆ ಬಂದಿವೆ. ಸಂಘಪರಿವಾರ ಮತ್ತು ಬಿಜೆಪಿಯ ಅಜೆಂಡಾಗಳು, ಅಹಿಂದ ವಿರೋಧಿಯಾಗಿದೆ ಎಂದು ಪ್ರತಿಭಟನಕಾರರು ದೂರಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ ಕುಕ್ಕೇಡಿ, ಬಿ.ಪದ್ಮಶೇಖರ ಜೈನ್, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಾಪಂ ಸದಸ್ಯೆ ಮಲ್ಲಿಕಾ ಶೆಟ್ಟಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಾಸು ಪೂಜಾರಿ, ಪುರಸಭಾ ಸದಸ್ಯರಾದ ಪ್ರವೀಣ್, ಮುನೀೀಶ್ ಅಲಿ, ಗಂಗಾಧರ್, ವಸಂತಿ ಚಂದಪ್ಪ, ಮುಹಮ್ಮದ್ ಇಕ್ಬಾಲ್ ಗೂಡಿಬಬಳಿ, ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯಿಲ, ಎಸ್‌ಡಿಪಿಐ ಪ್ರಮುಖರಾದ ಶಾಹುಲ್ ಹಮೀದ್, ಇಸಾಖ್ ತಲಪಾಡಿ, ಪ್ರಮುಖರಾದ ರಾಜ ಪಲ್ಲಮಜಲು, ರಾಜೀವ ಕಕ್ಯಪದವು, ಅಬುಬಕ್ಕರ್ ಅಮ್ಮುಂಜೆ, ಮೊದಲಾದವರು ಉಪಸ್ಥಿತರಿದ್ದು, ಪ್ರತಿಭಟನೆಗೆ ಬೆಂಬಲ ನೀಡಿದರು.
ಇದಕ್ಕೂ ಮುನ್ನ ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಜಾಥಾ ನಡೆಯಿತು.
ವಿವಿಧ ಸಂಘಟನೆಗಳ ಸಾಥ್: ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವಹೇಳನ ಮಾಡಲಾಗಿದೆ. ಇದಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದ ಮನುವಾದಿ ಚಿಂತನೆಯೇ ಕಾರಣ. ದಲಿತರು, ಹಿಂದುಳಿದವರು, ಮುಸ್ಲಿಮರ ಸಹಿತ ಅಲ್ಪಸಂಖ್ಯಾತರ ಧ್ರುವೀಕರಣ ಇಂದು ಅಗತ್ಯವಿದೆ ಎಂದು ದಲಿತ ಹೋರಾಟಗಾರರು, ಕಾಂಗ್ರೆಸ್, ಎಡಪಕ್ಷಗಳು, ಎಸ್‌ಡಿಪಿಐ, ಜೆಡಿಎಸ್, ಬಿಎಸ್ಪಿ ಪಕ್ಷಗಳ ಪ್ರಮುಖರು ಹೇಳಿದರು.