ಒಂದೂ ಪಂದ್ಯ ಆಡದೆ ದಿಲ್ಲಿ ಟ್ವೆಂಟಿ-20 ತಂಡಕ್ಕೆ ಆಯ್ಕೆಯಾದ ಬಿಹಾರ ಸಂಸದನ ಪುತ್ರ!
ಹೊಸದಿಲ್ಲಿ, ಜ.8: ಕ್ರೀಡೆಯಲ್ಲೂ ರಾಜಕೀಯ ಪ್ರವೇಶವಾಗುತ್ತಿದೆ ಎಂಬ ಮಾತಿಗೆ ದಿಲ್ಲಿ ಕ್ರಿಕೆಟ್ ಆಯ್ಕೆಗಾರರ ನಿರ್ಧಾರ ಪುಷ್ಠಿ ನೀಡಿದೆ.
ರಾಷ್ಟ್ರವಾದಿ ಜನತಾದಳ(ಆರ್‌ಜೆಡಿ) ಮಾಜಿ ಸದಸ್ಯ ಹಾಗೂ ತನ್ನದೇ ಆದ ಜನ್ ಅಧಿಕಾರಿ ಪಕ್ಷದ ಮೂಲಕ ಮಾಧೇಪುರ ಕ್ಷೇತ್ರದಿಂದ ಸಂಸದನಾಗಿ ಆಯ್ಕೆಯಾಗಿರುವ ಪಪ್ಪು ಯಾದವ್ ಅಲಿಯಾಸ್ ರಾಜೇಶ್ ರಂಜನ್‌ರ ಪುತ್ರ ಸಾರ್ಥಕ್ ರಂಜನ್ ದಿಲ್ಲಿಯ ಅಂಡರ್-23 ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸಿಕೆ ನಾಯ್ಡು ಟ್ರೋಫಿಗೆ ಅತುಲ್ ವಾಸನ್, ಹರಿ ಗದ್ವಾನಿ ಹಾಗೂ ರಾಬಿನ್ ಸಿಂಗ್ ಜೂನಿಯರ್ ಅವರಿದ್ದ ಮೂವರು ಸದಸ್ಯರ ಆಯ್ಕೆ ಸಮಿತಿಯ ಪ್ರಮುಖ ಆಟಗಾರರನ್ನು ನಿರ್ಲಕ್ಷಿಸಿ ಇತ್ತೀಚೆಗೆ ಒಂದೂ ಪಂದ್ಯ ಆಡದ ಸಾರ್ಥಕ್ ರಂಜನ್‌ರನ್ನು ಆಯ್ಕೆ ಮಾಡಿರುವುದಕ್ಕೆ ಎಲ್ಲೆಡೆಯಿಂದ ಟೀಕೆ ಎದುರಿಸುತ್ತಿದೆ.
ಕಳೆದ ಮುಶ್ತಾಕ್ ಅಲಿ ಟೂರ್ನಿಗೆ ಸಾರ್ಥಕ್‌ರನ್ನು ಆಯ್ಕೆ ಮಾಡಿದಾಗ ವಿವಾದ ಉಂಟಾಗಿದ್ದು, ಆ ಟೂರ್ನಿಯಲ್ಲಿ ಸಾರ್ಥಕ್ 3 ಪಂದ್ಯಗಳಲ್ಲಿ ಒಟ್ಟು 10 ರನ್ ಗಳಿಸಿದ್ದರು. ಈ ಋತುವಿನ ಆರಂಭದಲ್ಲಿ ಸಾರ್ಥಕ್ ರಣಜಿ ಟ್ರೋಫಿಯ ಸಂಭಾವ್ಯ ಪಟ್ಟಿಯಿಂದ ಹಿಂದೆ ಸರಿದಿದ್ದರು. ಮಿಸ್ಟರ್ ಇಂಡಿಯಾ ಸ್ಪರ್ಧೆಗೆ ತಯಾರಿ ನಡೆಸುವ ಉದ್ದೇಶದಿಂದ ಕ್ರಿಕೆಟ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಕಾರಣ ನೀಡಿದ್ದರು.
ಸಾರ್ಥಕ್ ತಾಯಿ, ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಡಿಡಿಸಿಎ ಆಡಳಿತಾಧಿಕಾರಿ, ಜಸ್ಟಿಸ್(ನಿವೃತ್ತ) ವಿಕ್ರಮ್‌ಜಿತ್ ಸೇನ್‌ಗೆ ಇ-ಮೇಲ್ ಕಳುಹಿಸಿ, ತನ್ನ ಮಗ ಈ ಹಿಂದೆ ಖಿನ್ನತೆಯಿಂದ ಬಳಲುತ್ತಿದ್ದ. ಈಗ ಸಂಪೂರ್ಣ ಫಿಟ್ ಆಗಿದ್ದಾನೆ ಎಂದು ಹೇಳಿದ್ದರು. ಶಿಷ್ಟಾಚಾರದ ಪ್ರಕಾರ ಜಸ್ಟಿಸ್ ಸೇನ್ ಪತ್ರವನ್ನು ದಿಲ್ಲಿ ಆಯ್ಕೆಗಾರರಿಗೆ ಕಳುಹಿಸಿಕೊಟ್ಟಿದ್ದರು. ಈ ವರ್ಷ ಒಂದೂ ಪಂದ್ಯವನ್ನು ಆಡದ ಸಾರ್ಥಕ್ ಸಿ.ಕೆ. ನಾಯ್ಡು ಟ್ರೋಫಿಗೆ ಪ್ರಕಟಿಸಲಾಗಿರುವ ದಿಲ್ಲಿಯ ಅಂಡರ್-23 ತಂಡಕ್ಕೆ ಆಯ್ಕೆಯಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ದಿಲ್ಲಿ ಅಂಡರ್-23 ರಾಷ್ಟ್ರೀಯ ಚಾಂಪಿಯನ್ ಆಗಲು ಕಾರಣರಾಗಿದ್ದ ಹಿತೇನ್ ದಲಾಲ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.