ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ: ಕಿಲ್ಲೂರ್ ತಂಙಳ್
ಕಾಪು, ಜ.8: ಶಿಕ್ಷಣ ವಂಚಿತ ಜನರಿಂದ ಮಾತ್ರ ಸಮಾಜ ಬಾಹಿರ ಕೃತ್ಯಗಳು ನಡೆಯುತ್ತಿವೆ. ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಆಧ್ಯಾತ್ಮಿಕ ನಾಯಕ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರು ತಂಙಳ್ ಹೇಳಿದ್ದಾರೆ.
ಕಟಪಾಡಿ ಜಂಕ್ಷನ್‌ನಲ್ಲಿ ಇತ್ತೀಚೆಗೆ ನಡೆದ ಮರ್ಕಝುಲ್ ಬದ್ರಿಯ್ಯ ಸಂಸ್ಥೆಯ ದಶ ವಾರ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಕಾರ್ಯಕ್ರಮ ವನ್ನು ಮೂಳೂರು ಸುನ್ನೀ ಸೆಂಟರ್ ಮ್ಯಾನೇಜರ್ ಮುಸ್ತಫಾ ಸಅದಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮರ್ಕಝುಲ್ ಬದ್ರಿಯ್ಯ ಉಪಾಧ್ಯಕ್ಷ ಹಾಜಿ ಅಬೂಬಕರ್ ನೇಜಾರ್ ವಹಿಸಿದ್ದರು. ಮರ್ಕಝುಲ್ ಬದ್ರಿಯ್ಯ ಕಾರ್ಯಾಧ್ಯಕ್ಷ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುವಾ ನೆರವೇರಿಸಿದರು.
ನೌಫಲ್ ಸಖಾಫಿ ಕಳಸ ‘ರಕ್ಷಣೆಗಾಗಿ ಶಿಕ್ಷಣ’ ಎಂಬ ವಿಷಯದ ಕುರಿತು ಮಾತನಾಡಿದರು. ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ವಿನಯ ಬಲ್ಲಾಳ್, ಸಲೀಂ ಮದನಿ ಕುತ್ತಾರ್, ಮುಹ್ಯಿದ್ದೀನ್ ಹಾಜಿ ಗುಡ್ವಿಲ್, ಅಡ್ವಕೇಟ್ ಇಲ್ಯಾಸ್ ನಾವುಂದ, ಬಶೀರ್ ಮದನಿ ಕಟಪಾಡಿ, ಆಬಿದ್ ಬ್ಯಾರಿ, ಅಶ್ರಫ್ ಅಮ್ಜದಿ ಪಕ್ಷಿಕೆರೆ, ಮನ್ಸೂರ್ ಕೆ.ಎಸ್.ಎಂ., ಶೇಕ್ ಮುಹಮ್ಮದ್ ನಹೀಂ ಕಟಪಾಡಿ, ಶಅಬಾನ್ ಹಂಗಳೂರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ, ವಂದಿಸಿದರು.