ಸಂಗೀತ ಮನುಷ್ಯನಿಗೆ ಅಗತ್ಯ, ನಾದೋಪಾಸನೆಯಿಂದ ಮನಸ್ಸಿಗೆ ನೆಮ್ಮದಿ: ಸುಬ್ರಹ್ಮಣ್ಯ ಉಪಾಧ್ಯಾಯ
ಭಟ್ಕಳ, ಜ. 8: ಸಂಗೀತ ಮನುಷ್ಯನಿಗೆ ಅಗತ್ಯವಾಗಿದ್ದು, ನಾದೋಪಾಸನೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು ಎಂದು ವೇ.ಮೂ. ಸುಬ್ರಹ್ಮಣ್ಯ ಉಪಾಧ್ಯಾಯ ಹೇಳಿದರು.
ಅವರು ನಾದಭಾರತೀ ಸಂಗೀತ ಅನುಸಂಧಾನ ಪ್ರತಿಷ್ಟಾನ ಇದರ ವತಿಯಿಂದ ಮಾರುಕೇರಿ ಹೂತ್ಕಳದ ಶ್ರೀ ಧನ್ವಂತರಿ ದೇವಸ್ಥಾನದಲ್ಲಿ ಇದರ ನಿಮ್ಮನೇಲಿ ನಮ್ಮ ದನಿ ಸಂಗೀತ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಮಾತನಾಡಿದ ವೇ. ಮೂ. ಬಾಲಚಂದ್ರ ಭಟ್ಟ ಮಾತನಾಡಿ ಮಾನವರು ರಾಕ್ಷಸೀ ಭಾವನೆಗಳನ್ನು ಬಿಟ್ಟು ಮಾನ ವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ಈ ದೇಶದಲ್ಲಿ ಸಹಸ್ರಾರು ಯತಿಗಳು ದೇಶದ ಉದ್ಧಾರಕ್ಕಾಗಿ ಸಮಸ್ತ ಜೀವ ರಾಶಿಗಳ ಒಳಿತಿಗಾಗಿ ಶ್ರಮ ಪಟ್ಟಿದ್ದರಿಂದಲೇ ಜಗತ್ತು ಇಂದು ಸುಭಿಕ್ಷವಾಗಿದೆ. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಆಶೀರ್ವಾದದಿಂದ ಈ ಸೀಮೆಯ ಎಲ್ಲ ಸದ್ಬಕ್ತರಿಗೆ ಒಳಿತಾಗಿದ್ದು ಈ ಸೀಮೆಯು ಸಂಗೀತ ಸೇರಿದಂತೆ ಎಲ್ಲ ಕಲೆಗಳಲ್ಲಿ ದೇಶ ವಿದೇಶದಲ್ಲಿ ಗುತುತಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.
ಇನ್ನೋರ್ವ ಅತಿಥಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಸಂಗೀತಕ್ಕೆ ತಲೆಬಾಗದೇ ಇರುವವೇ ಇಲ್ಲ, ನಮ್ಮ ದೇಶದ ಸಂಸ್ಕೃತಿಯಲ್ಲಿ ಸಂಗೀತಕ್ಕೆ ಅತ್ಯಂತ ಮಹತ್ವವನ್ನು ನಿಡಲಾಗಿದ್ದು ಇಂದು ವಿದೇಶಿಯರೂ ಕೂಡಾ ನಮ್ಮನ್ನು ಅನುಕರಣೆ ಮಾಡುತ್ತಿರುವುದು ಸಂಗೀತ ಕ್ಕಿರುವ ಶಕ್ತಿಯನ್ನು ಬಿಂಬಿಸುತ್ತದೆ ಎಂದರು. ಸಂಗೀತದಿಂದ ರೋಗವೂ ವಾಸಿಯಾಗುವುದನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು ಎಂದ ಅವರು ಪಶು, ಪಕ್ಷಿಗಳು, ವೃಕ್ಷಗಳೂ ಕೂಡಾ ಸಂಗೀತದಿಂದ ಪ್ರಸನ್ನತೆಯನ್ನು ಪಡೆಯುತ್ತವೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವೇ.ಮೂ. ಸುಬ್ರಾಯ ಭಟ್ಟ, ನಾದಭಾರತೀ ಅಧ್ಯಕ್ಷ ಜನಾರ್ಧನ ಹೆಗಡೆ ಮಾತನಾಡಿದರು. ನಾದಭಾರತೀ ಪ್ರತಿಷ್ಟಾನದ ವರ್ಷದ ಕಾರ್ಯಕ್ರಮಗಳನ್ನು ಪ್ರಾಯೋಜಿಸಿದವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿದ ವಿನಾಯಕ ಭಟ್ಟ, ಸಾಂಬ ಉಪಾಧ್ಯಾಯ, ಸಂದ್ಯಾ ಹೆಬ್ಬಾರ್ ಮಾತನಾಡಿದರು.
ಸಹನಾ ಭಟ್ಟ ಪ್ರಾರ್ಥಿಸಿದರು. ನಾದಭಾರತೀ ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಹೆಬ್ಬಾರ್ ಹಾಗೂ ಅನಂತರ ಎಸ್. ಹೆಬ್ಬಾರ್ ನಿರೂಪಿಸಿದರು. ಗಜಾನನ ಹೆಬ್ಬಾರ್ ವಂದಿಸಿದರು.