ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ನ್ಯಾಯಮೂರ್ತಿ ಸಾವಿನ ತನಿಖೆಗೆ ಆಗ್ರಹ

Update: 2018-01-08 16:50 GMT

 ಹೊಸದಿಲ್ಲಿ, ಜ. 7: ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿ.ಎಚ್. ಲೋಯಾ ಅವರ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ.

ಮನವಿ ಸಲ್ಲಿಸಿರುವ ಬಾಂಬೆ ವಕೀಲರ ಸಂಘಟನೆ, ಈ ಸಾವಿನ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸುವಂತೆ ಮನವಿ ಮಾಡಿದೆ.

 ಬಿಜೆಪಿ ವರಿಷ್ಠ ಅಮಿತ್ ಶಾ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ 48ರ ಹರೆಯದ ನ್ಯಾಯಮೂರ್ತಿ ಲೋಯಾ 2014 ಡಿಸೆಂಬರ್ 1ರಂದು ನಾಗಪುರದಲ್ಲಿ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ ಸಂದರ್ಭ ಮೃತಪಟ್ಟಿದ್ದರು. ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಶಾ ಹಾಗೂ ಹಲವು ಉನ್ನತ ಪೊಲೀಸ್ ಅಧಿಕಾರಿಗಳು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

   ಕಾರವಾನ್ ಸುದ್ದಿ ಮ್ಯಾಗಝಿಗೆ ಸಂದರ್ಶನ ನೀಡಿದ್ದ ಲೋಯಾ ಕುಟುಂಬ, ಲೋಯಾ ಅವರದ್ದು ಅಸ್ವಾಭಾವಿಕ ಸಾವು ಎಂದಿತ್ತು. ಈ ಹಿನ್ನೆಲೆಯಲ್ಲಿ ಲೋಯಾ ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂಬ ಆಗ್ರಹ ಎಲ್ಲೆಡೆಯಿಂದ ಕೇಳಿಬಂದಿತ್ತು.

 ನಾಗಪುರದಲ್ಲಿ ನ್ಯಾಯಮೂರ್ತಿ ಲೋಯಾ ಅವರನ್ನು ಭೇಟಿಯಾಗಿದ್ದ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ನ್ಯಾಯಮೂರ್ತಿ ಭೂಷಣ್ ಗವಾಯಿ ಖಾಸಗಿ ಚಾನೆಲ್ ಜೊತೆ ಮಾತನಾಡಿ, ಲೋಯಾ ಅವರ ಸಾವಿನಲ್ಲಿ ಯಾವುದೇ ನಿಗೂಢತೆ ಇಲ್ಲ ಎಂದಿದ್ದರು.

 ಲೋಯಾ ಅವರ ಸಹೋದರಿ ಅನುರಾಧಾ ಬಿಯಾನಿ ಅವರು ಲೋಯಾ ಅವರ ಸಾವಿನ ಬಗ್ಗೆ ಎತ್ತಿದೆ ಪ್ರಶ್ನೆಗಳನ್ನು ಕಾರವಾನ್‌ನ ಲೇಖನ ಉಲ್ಲೇಖಿಸಿತ್ತು. ಲೋಯಾ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಹಾಗೂ ಹುದ್ದೆಗೆ ರಾಜೀನಾಮೆ ನೀಡಲು ಪರಿಗಣಿಸಿದ್ದರು ಎಂದು ಲೋಯಾ ಅವರ ಮಾವ ಖಾಸಗಿ ಚಾನೆಲ್ ಒಂದಕ್ಕೆ ತಿಳಿಸಿದ್ದರು. ಮರಣೋತ್ತರ ಪರೀಕ್ಷೆಗೆ ಯಾರು ಆದೇಶಿಸಿದರು ಹಾಗೂ ಅದಕ್ಕೆ ಸಹಿ ಹಾಕಿದ ವ್ಯಕ್ತಿ ಯಾರು ಎಂಬ ಬಗ್ಗೆ ಲೋಯಾ ಅವರ ಕುಟುಂಬ ಅನುಮಾನ ವ್ಯಕ್ತಪಡಿಸಿತ್ತು. ಲೋಯಾ ಅವರ ಮೃತದೇಹ ಹಿಂದಿರುಗಿಸುವಾಗ ಅವರ ಅಂಗಿಯಲ್ಲಿ ರಕ್ತದ ಕಲೆ ಇತ್ತು ಎಂದು ಕೂಡ ಕುಟುಂಬ ಪ್ರತಿಪಾದಿತ್ತು.

ಲೋಯಾ ಅವರನ್ನು ಆರಂಭದಲ್ಲಿ ನಾಗಪುರದಲ್ಲಿರುವ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅನಂತರ ದೊಡ್ಡ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News