ಇರಾನ್: ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಗೆ ನಿಷೇಧ
ದುಬೈ, ಜ. 8: ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದನ್ನು ಇರಾನ್ ನಿಷೇಧಿಸಿದೆ ಎಂದು ಹಿರಿಯ ಶಿಕ್ಷಣ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂಗ್ಲಿಷ್ ಭಾಷೆಯನ್ನು ಬಾಲ್ಯದಲ್ಲೇ ಕಲಿತರೆ ಪಾಶ್ಚಾತ್ಯ ‘ಸಾಂಸ್ಕೃತಿಕ ಆಕ್ರಮಣ’ಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬುದಾಗಿ ಧಾರ್ಮಿಕ ನಾಯಕರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
‘‘ಸರಕಾರಿ ಮತ್ತು ಸರಕಾರೇತರ ಪ್ರಾಥಮಿಕ ಶಾಲೆಗಳ ಅಧಿಕೃತ ಪಠ್ಯದಲ್ಲಿ ಇಂಗಿಷ್ ಕಲಿಸುವುದು ಕಾನೂನು ಮತ್ತು ನಿಯಮಾವಳಿಗಳಿಗೆ ವಿರುದ್ಧವಾಗಿದೆ’’ ಎಂದು ಸರಕಾರಿ ನಿಯಂತ್ರಣದ ಹೈ ಎಜುಕೇಶನ್ ಕೌನ್ಸಿಲ್‌ನ ಮುಖ್ಯಸ್ಥ ಮೆಹ್ದಿ ನವೀದ್-ಆದಮ್ ಶನಿವಾರ ಸರಕಾರಿ ಟೆಲಿವಿಶನ್‌ಗೆ ತಿಳಿಸಿದರು.
‘‘ವಿದ್ಯಾರ್ಥಿಗಳ ಇರಾನಿ ಸಂಸ್ಕೃತಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಅಡಿಪಾಯ ಬೀಳುತ್ತದೆ ಎಂಬ ತಿಳುವಳಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಅವರು ಹೇಳಿದರು. ಪಠ್ಯೇತರ ಇಂಗ್ಲಿಷ್ ತರಗತಿಗಳನ್ನೂ ನಿಷೇಧಿಸಬಹುದಾಗಿದೆ ಎಂದರು.
ಇರಾನ್‌ನಲ್ಲಿ ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ 12-14ನೆ ವರ್ಷ ವಯಸ್ಸಿನಲ್ಲಿ ಸಾಮಾನ್ಯವಾಗಿ ಇಂಗ್ಲಿಷ್ ಕಲಿಸಲು ಆರಂಭಿಸಲಾಗುತ್ತದೆ. ಆದರೆ, ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಈ ವಯಸ್ಸಿಗಿಂತಲೂ ಕೆಳಗಿನ ಮಕ್ಕಳಿಗೆ ಇಂಗ್ಲಿಷ್ ಕಲಿಸಲಾಗುತ್ತದೆ.