ರಾಜ್ಯ ಸರ್ಕಾರದ ಯೋಜನೆಗಳನ್ನು ಮಾತ್ರ ಜನರಿಗೆ ತಲುಪಿಸಿ: ಸುಳ್ಳು ಹೇಳಬೇಡಿ
ಕಾಪು, ಜ. 8: ಕಳೆದ ನಾಲ್ಕೂವರೆ ವರ್ಷಗಳಲ್ಲಿ 165 ಭರವಸೆಯಲ್ಲಿ 155ನ್ನು ಈಡೇರಿಸಿದ್ದೇವೆ. ರಾಜ್ಯ ಸರ್ಕಾರದಲ್ಲಿ ಯಾವ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಅದನ್ನು ಮಾತ್ರ ಜನರಿಗೆ ತಲುಪಿಸಿ. ಯಾವತ್ತೂ ಕಾರ್ಯಕರ್ತರಿಗೆ ಸುಳ್ಳನ್ನು ಹೇಳಬೇಡಿ ಎಂದು ಈಗಾಗಲೇ ನಾನು ಎಲ್ಲಾ ಶಾಸಕರಿಗೆ ಹಾಗೂ ಕಾರ್ಯಕರ್ತರಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಸೋಮವಾರ ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ರೂ. 445 ಕೋಟಿ ಮೊತ್ತದ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಡಿದ ಸಾಧನೆಗಳನ್ನು ರಾಜ್ಯದ ಜನರಿಗೆ ಪುಸ್ತಕ ರೂಪದಲ್ಲಿ ನೀಡಲಿದ್ದೇವೆ. ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಯಾರಿಗು ಬೇಕಾದರೂ ಪರಿಶೀಲಿ ಸಬಹುದು. ಇದರಲ್ಲಿ ಒಂದು ಸುಳ್ಳಾದರೆ ನಾನು ತಲೆ ಬಾಗುತ್ತೇನೆ. ನುಡಿದಂತೆ ನಡೆದಿದ್ದೇವೆ. ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿದ್ದೇವೆ ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಅವರು ಮನವಿ ಮಾಡಿದರು.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯದ ದುಡ್ಡನ್ನೆ ಲೂಟಿ ಮಾಡಿದ ರಾಜ್ಯ ಅಧ್ಯಕ್ಷ ಯರಿಯೂರಪ್ಪ ಇಬ್ಬರೂ ಜೈಲಿಗೆ ಹೋಗಿ ಬಂದವರು. ಇವರು ಭ್ರಷ್ಟಾಚಾರವೇ ಇಲ್ಲದ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಮಾನಮರ್ಯಾದೆ ಎಂಬವುದೇ ಇವರಿಗೆ ಇಲ್ಲ ಎಂದು ಕಿಡಿಕಾರಿದರು.
ಜೆಡಿಎಸ್‌ನ ಕುಮಾರ ಹಾಗೂ ಬಿಜೆಪಿಯ ಯಡಿಯೂರಪ್ಪರವರು ಇಬ್ಬರೂ ಹಿಟ್ ಆಂಡ್ ರನ್ ಮಾಡುತ್ತಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆಗಳಿವೆ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾ ಜನರನ್ನು ದಾರಿ ತಪ್ಪಿಸುತ್ತಾರೆ. ಬಿಜೆಪಿ ಪಕ್ಷದವರು ಸುಳ್ಳನ್ನೇ ಬಂಡವಾಳನಮ್ನಾಗಿಸಿದ್ದಾರೆ. ಆದರೆ ಇದುವರೆಗೂ ಅವರು ದಾಖಲಾತಿ ಬಿಡುಗಡೆ ಮಾಡಲು ಆಗಲಿಲ್ಲ. ಇವರು ಪುಂಗಿ ಊದುವುದು ಗೊತ್ತು. ಆದರೆ ಇವರ ಬುಟ್ಟಿಯಲ್ಲಿ ಹಾವೇ ಇಲ್ಲ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ ಸುಳ್ಳನ್ನೇ ಪದೇ ಪದೇ ಹೇಳಿ ಸತ್ಯವನ್ನಾಗಿಸುವ ತಂತ್ರಗಾರಿಕೆ ಇವರಲ್ಲಿ ಇದೆ ಎಂದರು.
ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರಿಬ್ಬರೂ ಅವರು ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎನ್ನುತ್ತಾರೆ. ಆದರೆ ಇವರು ಮುಖ್ಯಮಂತ್ರಿಗಳಾವುದೇ ಇಲ್ಲ. ಅವರಿಗೂ ಗೊತ್ತಿಗೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಅದಕ್ಕಾಗಿ ಕೈಲಾಸವನ್ನೇ ತಂದುಕೊಡುತ್ತೇವೆ ಎನ್ನುತ್ತಾರೆ. ರಾಜ್ಯ ಜನರು ದಾರಿ ತಪ್ಪಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಏನು ಮಾಡಿದೆ ಎಂಬುವುದು ಜನರಿಗೆ ಗೊತ್ತಿದೆ ಎಂದು ಹೇಳಿದರು.
ಅನಂತ್ ಕುಮಾರ್ ಹೆಗಡೆ ನಾಲಾಯಕ್ಕು: ಅನಂತ್ ಕುಮಾರ್ ಹೆಗಡೆ ಹೇಳಿಕೆಯ ಬಗ್ಗೆ ಪ್ರಸ್ತಾವಿಸಿ ಸಿದ್ದರಾಮಯ್ಯ. ಹೆಣದ ಮೇಲೆ ರಾಜಕೀಯ ಮಾಡುವ ಇವರು, ಗಲಾಟೆ ಮಾಡಿ ಬೆಂಕಿ ಹಚ್ಚುತ್ತಾರೆ. ಕೇಂದ್ರದ ಸಚಿವರಾಗಿ ಮಾನವೀಯತೆ, ಸಂಸ್ಕೃತಿ ಇಲ್ಲದಂತೆ ವರ್ತಿಸುತಿದ್ದಾರೆ. ಇವರ ಕೆಲವೊಂದು ಹೇಳಿಕೆಗಳು ಮನುಷ್ಯತ್ವ ಇಲ್ಲದ ಹೇಳಿಕೆಗಳು. ಸಂಸತ್‌ನ ಭಾಷೆಯೇ ಗೊತ್ತಿಲ್ಲ. ಸಂವಿಧಾನದ ಮೇಲೆ ನಂಬಿಕೆ ಇಲ್ಲದಂತಹ ಇವರು ಗ್ರಾಮ ಪಂ. ಸದಸ್ಯರಾಗಲು ನಾಲಾಯಕ್ಕು ಎಂದು ಕಟುವಾಗಿ ಟೀಕಿಸಿದರು.
ರಾಜ್ಯಕ್ಕೆ ಬಂದಿದ್ದ ಆದಿತ್ಯನಾಥ್ ನಮ್ಮಲ್ಲಿ ಹಿಂದುತ್ವದ ಬಗ್ಗೆ ಪಾಠ ಮಾಡುತ್ತಾರೆ. ಮನುಷ್ಯತ್ವ ಇಲ್ಲದ ಮೃಗೀಯರಂತೆ ವರ್ತಿಸಿ ಸಮಾಜ ಒಡೆದು ಬೆಂಕಿ ಹಚ್ಚುವವರಲ್ಲಿ ನಾನು ಹಿಂದುತ್ವದ ಪಾಠಕಲಿಯುವ ಅಗತ್ಯ ಇಲ್ಲ. ಹಿಂದುತ್ವದ ಬಗ್ಗೆ ಹೇಳುವ ನೈತಿಕತೆಯೂ ನಿಮಗಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಹಿಂದುತ್ವ ಅಂದರೆ ಅದು ಹೃದಯದಲ್ಲಿ ಮಾನವೀಯತೆ ತುಂಬಿರುವವರು. ನಾನು ಅಂತಹ ಹಿಂದುತ್ವ ಹೊಂದಿದ್ದೇನೆ ಎಂದರು.
ಗೊಬ್ಬರ ಹೊತ್ತಿದ್ದೇನೆ: ಗೋಹತ್ಯೆ ಬಗ್ಗೆ ಮಾತನಾಡುವ ಆದಿತ್ಯನಾಥ್ ಗೋವನ್ನು ಸಾಕಿದ್ದಾರಾ ? ಸೆಗಣಿ ಹೊತ್ತಿದ್ದಾರಾ ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ. ಹಸುವನ್ನೇ ಸಾಕದವರು. ಹಾಲನ್ನೇ ಕರೆಯದವರಿಂದ ನಾವು ಕೇಳುವ ಪರಿಸ್ಥಿತಿ ಬಂದಿದೆ. ಇವರು ಡೋಂಗಿಗಳು. ನಾನು ಬಾಲ್ಯದಲ್ಲಿ ಗೋವನ್ನು ಸಾಕಿದ್ದೇನೆ. ಸೆಗಣಿ, ಗೊಬ್ಬರ ಹೊತ್ತಿದ್ದೇನೆ. ಗೋವಿನ ಬಗ್ಗೆ ನಮಗೂ ಅಪಾರ ಪ್ರೀತಿ ಇದೆ. ರಾಜ್ಯದಲ್ಲೂ ಗೋಹತ್ಯ ಜಾರಿಯಲ್ಲಿದೆ. ಆದರೆ ಕೆಲವೊಂದು ನಿಯಮಗಳು ಇವೆ ಎಂದರು.
ಗೋಮಾಂಸ ತಿನ್ನಲು ಮುಂದಾಗಿದ್ದೆ: ಗೋಮಾಂಸ ತಿನ್ನುವವರು ಅಲ್ಪಸಂಖ್ಯಾತರು ಮಾತ್ರ ಅಲ್ಲ. ಹಿಂದೂಗಳು ತಿನ್ನುತ್ತಾರೆ. ನಾನು ತಿನ್ನಲು ಮುಂದಾಗಿದ್ದೆ. ಆದರೆ ಆಗಲಿಲ್ಲ. ನಿಮ್ಮಿಂದ ಕೇಳಿ ಆಹಾರ ತಿನ್ನಬೇಕಾಗಿಲ್ಲ. ಅದು ಅವರವರ ಆಹಾರ ಪದ್ಧತಿ ಎಂದರು. ನಾಳೆ ಕಾವಿ ಹಾಕಲು ಹೇಳಿದರೆ ಕಾವಿ ಹಾಕಬೇಕಾ ಎಂದು ಪ್ರಶ್ನಿಸಿದರು.
ಶಾಸಕ ವಿನಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಯುಟಿ ಖಾದರ್, ಪ್ರಮೋದ್ ಮಧ್ವರಾಜ್, ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಯು. ಆರ್. ಸಭಾಪತಿ, ಗೋಪಾಲ ಭಂಡಾರಿ, ಎಸ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಪೂರ್, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ದಕ್ಷಿಣ ಅಧ್ಯಕ್ಷ ನವೀನ ಚಂದ್ರ ಜೆ ಶೆಟ್ಟಿ, ಉತ್ತರ ಅಧ್ಯಕ್ಷ ಸುಧೀರ್ ಹೆಗ್ಡೆ, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪುರಸಭಾ ಅಧ್ಯಕ್ಷೆ ಸೌಮ್ಯಾ, ಮುಖ್ಯಾಧಿಕಾರಿ ರಾಯಪ್ಪ ಇದ್ದರು.
ಸಮಾವೇಶಕ್ಕೆ ಆರಂಭದಲ್ಲಿ ಕಾಪು ಬಂಗ್ಲೆಯಲ್ಲಿ 5 ಕೊಟಿ ರೂ. ವೆಚ್ಚದ ಕಾಪು ಪುರಸಭೆಯ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. 445 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಮಾಡಲಾಯಿತು. ಕೃಷಿ ಇಲಾಖೆ, ತಾಲೂಕು ಪಂಚಾಯತ್, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮೀನುಗಾರಿಕಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಅಂಬೇಡ್ಕರ್ ನಿಗಮದಿಂದ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಸ್ವಸಹಾಯ ಗುಂಪುಗಳಿಗೆ ಸೀರೆಯನ್ನು ವಿತರಿಸಲಾಯಿತು. ಸಮಾವೇಶದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.
ಜನವರಿಯಲ್ಲೇ ತಾಲೂಕು ಅಸ್ತಿತ್ವಕ್ಕೆ: ಕಾಪು ಹೊಸ ತಾಲ್ಲೂಕಾಗಿ ಅಸ್ತಿತ್ವಕ್ಕೆ ಜನವರಿಯಲ್ಲೇ ಅಸ್ತಿತ್ವಕ್ಕೆ ಬರಲಿದೆ. ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ, ಹೆಬ್ರಿ, ಕಾಪು, ಬ್ರಹ್ಮಾವರ ತಾಲ್ಲೂಕಾಗಿ ರಚಿಸಲಾಗಿದೆ. ಜನರ ಅನುಕೂಲಕ್ಕಾಗಿ ರಾಜ್ಯದಲ್ಲಿ 50 ತಾಲೂಕು ಘೋಷಣೆ ಮಾಡಲಾಗಿದೆ. ಎಲ್ಲವೂ ಜನವರಿಯಲ್ಲಿ ಜಾರಿಗೆ ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.