ಅಶ್ಲೀಲ ವೆಬ್‌ಸೈಟ್ ಪ್ರವೇಶಿಸಲು ಬ್ರಿಟನ್ ಸಂಸತ್‌ನಿಂದ ದಿನಕ್ಕೆ 160 ಯತ್ನ!
ಲಂಡನ್, ಜ. 8: 2017ರ ಉತ್ತರಾರ್ಧದಲ್ಲಿ, ಬ್ರಿಟನ್‌ನ ಸಂಸದ್ ಸದನಗಳ ಕಂಪ್ಯೂಟರ್‌ಗಳಿಂದ ಅಶ್ಲೀಲ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಪ್ರತಿ ದಿನ ಸುಮಾರು 160 ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಬ್ರಿಟನ್‌ನ ಪ್ರೆಸ್ ಅಸೋಸಿಯೇಶನ್ (ಪಿಎ) ಸೋಮವಾರ ವರದಿ ಮಾಡಿದೆ.
ಜೂನ್‌ನಲ್ಲಿ ನಡೆದ ಸಂಸದೀಯ ಚುನಾವಣೆಯ ಬಳಿಕ ಸಂಸತ್‌ನ ಕಂಪ್ಯೂಟರ್ ಜಾಲದೊಂದಿಗೆ ಸಂಪರ್ಕ ಹೊಂದಿರುವ ಕಂಪ್ಯೂಟರ್‌ಗಳಿಂದ ಅಶ್ಲೀಲ ವೆಬ್‌ಸೈಟ್‌ಗಳಿಗೆ ಹೋಗಲು ಒಟ್ಟು 24,473 ಪ್ರಯತ್ನಗಳನ್ನು ಮಾಡಲಾಗಿದೆ ಎಂದು ‘ಫ್ರೀಡಂ ಆಫ್ ಇನ್ಫಾರ್ಮೇಶನ್’ (ಎಫ್‌ಒಐ) ಮೂಲಕ ಪಿಎ ಸಂಗ್ರಹಿಸಿದ ಮಾಹಿತಿ ಹೇಳುತ್ತದೆ.
ಪ್ರಧಾನಿ ತೆರೇಸಾ ಮೇ ಈಗಾಗಲೇ ತನ್ನ ಸುದೀರ್ಘ ಕಾಲದ ಸ್ನೇಹಿತ ಡೇಮಿಯನ್ ಗ್ರೀನ್‌ರನ್ನು ಲೈಂಗಿಕ ದುರ್ವರ್ತನೆ ಆರೋಪದ ಹಿನ್ನೆಲೆಯಲ್ಲಿ ಸಂಪುಟದಿಂದ ಹೊರಹಾಕಿರುವುದನ್ನು ಸ್ಮರಿಸಬಹುದಾಗಿದೆ. ಡೇಮಿಯನ್‌ರ ಸಂಸತ್‌ನಲ್ಲಿರುವ ಕಂಪ್ಯೂಟರ್‌ನಲ್ಲಿ 2008ರಲ್ಲಿ ವಯಸ್ಕರ ಚಿತ್ರಗಳು ಪತ್ತೆಯಾಗಿದ್ದವು.
ಬ್ರಿಟನ್ ಸಂಸತ್ತು 2016ರಲ್ಲಿ ಇಂತಹ 1,13,208 ಪ್ರಯತ್ನಗಳನ್ನು ತಡೆಹಿಡಿದಿತ್ತು.