ಡಿವೈಎಫ್‌ಐ ಜಿಲ್ಲಾಧ್ಯಕ್ಷರ ಕಾರಿಗೆ ಬೈಕ್ ಢಿಕ್ಕಿ: ಬರ್ಕೆ ಠಾಣೆಗೆ ದೂರು
ಮಂಗಳೂರು, ಜ.9: ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದ ಬೈಕೊಂದು ಕಾರಿಗೆ ಢಿಕ್ಕಿ ಹೊಡೆದ ಘಟನೆ ಸೋಮವಾರ ರಾತ್ರಿ ನಗರದಲ್ಲಿ ನಡೆದಿದೆ. ಯಾವುದೋ ದುಷ್ಕೃತ್ಯ ನಡೆಸಲು ಸಂಚು ನಡೆಸಿರಬೇಕು ಎಂದು ಅನುಮಾನಿಸಿರುವ ಇಮ್ತಿಯಾಝ್ ಈ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ.
ಜ. 8ರಂದು ರಾತ್ರಿ 9:15ಕ್ಕೆ ಸುರತ್ಕಲ್ ಡಿವೈಎಫ್‌ಐ ಘಟಕದ ಕಾರ್ಯಕ್ರಮವನ್ನು ಮುಗಿಸಿ ಪಾಂಡೇಶ್ವರದಲ್ಲಿರುವ ತನ್ನ ಮನೆಗೆ ಕಾರಿನಲ್ಲಿ ಹೋಗುತ್ತಿ ದ್ದಾಗ ಬಲ್ಲಾಲ್‌ಬಾಗ್ ಬಳಿಯಿಂದ ಹಿಂಬಾಲಿಸಿಕೊಂಡು ಬಂದ ಬೈಕ್ ಟಿಎಂಎ ಪೈ ಹಾಲ್ ಬಳಿ ಕಾರಿನ ಎಡಭಾಗಕ್ಕೆ ಢಿಕ್ಕಿ ಹೊಡೆದು ನನ್ನನ್ನು ದುರುಗುಟ್ಟಿ ನೋಡುತ್ತಲೇ ಮುಂದೆ ಹೋದರು. ನಾನು ನನ್ನ ಕಾರು ನಿಲ್ಲಿಸಲು ಮುಂದಾದಾಗ ಬೈಕ್ ಕೋಡಿಯಾಲ್‌ಗುತ್ತು ಅಡ್ಡ ರಸ್ತೆ ಕಡೆ ತಿರುಗಿತು. ನಾನು ಕಾರನ್ನು ಅದೇ ರಸ್ತೆಯಾಗಿ ಚಲಾಯಿಸಿದಾಗ ಬೈಕ್ ನಿಲ್ಲಿಸದೆ ಮುಂದೆ ಚಲಿಸಿತು. ಅನುಮಾನಗೊಂಡ ನಾನು ತನ್ನ ವಿರುದ್ಧ ಯಾವುದೋ ಸಂಚು ನಡೆಯುವ ಸಾಧ್ಯತೆಯನ್ನು ಮನಗಂಡು ಕಾರನ್ನು ಹಿಂದಿರುಗಿಸಿದೆ. ನನ್ನ ಕಾರಿನ ಹಿಂದಿನಿಂದ ಮತ್ತೊಂದು ಬೈಕ್ ಬರುವುದನ್ನು ಗಮನಿಸಿ ಅಲ್ಲೇ ಇರುವ ಫ್ಲಾಟ್‌ನ ಎದುರು ಕಾರು ನಿಲ್ಲಿಸಿದೆ. ಹಾಗೇ ಕಾರಿನ ಮಡ್‌ಗಾರ್ಡ್ ಹಿಂಬದಿ ಟಯರ್‌ಗೆ ಸಿಕ್ಕಿ ಹಾಕಿಕೊಂಡಿತ್ತು. ಅದನ್ನು ಸರಿಪಡಿಸಲು ಕಾರಿನಿಂದ ಇಳಿದಾಗ ನನ್ನನ್ನು ಹಿಂಬಾಲಿಸಿಕೊಂಡು ಬಂದ ಬೈಕ್ ದೂರದಲ್ಲಿ ನಿಂತಿರುವುದನ್ನು ಕಂಡೆ. ಅಪಾಯದ ಮುನ್ಸೂಚನೆ ಅರಿತ ನಾನು ಅಲ್ಲಿಂದ ವಾಪಸ್ ಆಗಿ ಮನೆ ಸೇರಿದೆ. ಅದೇ ದಾರಿಯಾಗಿ ಮುಂದಕ್ಕೆ ಹೋಗಿದ್ದರೆ ನನ್ನ ಮೇಲೆ ದಾಳಿ ನಡೆಯುವ ಸಾಧ್ಯತೆ ಇತ್ತು. ಹಾಗಾಗಿ ನನ್ನ ಪ್ರಾಣಕ್ಕೆ ಹಾನಿ ಎಸಗಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಜರಗಿಸಲು ಇಮ್ತಿಯಾಝ್ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.