ಅಮಾನತಿಗೊಳಗಾದ ಬಗ್ಗೆ ಯೂಸುಫ್ ಪಠಾಣ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2018-01-09 13:24 GMT

ಹೊಸದಿಲ್ಲಿ, ಜ.9: ಆಲ್‌ರೌಂಡರ್ ಯೂಸುಫ್ ಪಠಾಣ್ ಅವರಿಗೆ ನಿಷೇಧಿತ ಉದ್ದೀಪನಾ ದ್ರವ್ಯ ಸೇವನೆ ಆರೋಪದಲ್ಲಿ ಬಿಸಿಸಿಐ ಐದು ತಿಂಗಳ ನಿಷೇಧ ವಿಧಿಸಿದೆ. ಈ ಆರೋಪ ಕೇಳಿ ಬಂದ ಬೆನ್ನಲ್ಲೇ ಯೂಸುಫ್ ಪಠಾಣ್ ಅವರನ್ನು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಬರೋಡಾ ತಂಡಕ್ಕೆ ಆಯ್ಕೆ ಮಾಡದಂತೆ ಬಿಸಿಸಿಐ ಬರೋಡಾ ಕ್ರಿಕೆಟ್ ಸಂಸ್ಥೆಗೆ ಆದೇಶ ನೀಡಿತ್ತು ಎನ್ನಲಾಗಿದೆ.

35ರ ಹರೆಯದ ಪಠಾಣ್ ಅವರನ್ನು ರಣಜಿ ತಂಡಕ್ಕೆ ಆಯ್ಕೆ ಮಾಡದ ಆಯ್ಕೆ ಸಮಿತಿಯ ನಿಲುವಿನ ಬಗ್ಗೆ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿತ್ತು. ಆದರೆ ಆಗ ಬರೋಡಾ ಕ್ರಿಕೆಟ್ ಸಂಸ್ಥೆ ಪಠಾಣ್ ಆಯ್ಕೆಯಾಗದಿರುವುದಕ್ಕೆ ಕಾರಣ ತಿಳಿಸಿರಲಿಲ್ಲ.ಬಿಸಿಸಿಐ 2017 ಆಗಸ್ಟ್ 15ರಂದು ಯೂಸುಫ್ ಪಠಾಣ್ ಅವರಿಗೆ ಐದು ತಿಂಗಳ ನಿಷೇಧ ವಿಧಿಸಿತ್ತು. ನಿಷೇಧದ ಅವಧಿಯು 2018, ಜನವರಿ 14ರಂದು ಕೊನೆಗೊಳ್ಳಲಿದೆ.

ಗಂಟಲು ಸೋಂಕಿಗೆ ಔಷಧಿ ತೆಗೆದುಕೊಂಡಿದ್ದೆ: ಪಠಾಣ್

ಡೋಪಿಂಗ್ ಆರೋಪದಲ್ಲಿ ಐದು ತಿಂಗಳ ನಿಷೇಧಕ್ಕೊಳಗಾಗಿರುವ ಯೂಸುಫ್ ಪಠಾಣ್, ಡೋಪಿಂಗ್ ಆರೋಪಕ್ಕೆ ಸಂಬಂಧಿಸಿ ನ್ಯಾಯೋಚಿತ ವಿಚಾರಣೆಗೆ ತನ್ನ ವಾದವನ್ನು ಮಂಡಿಸಲು ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾನು ಸೇವಿಸಿರುವ ಔಷಧದಲ್ಲಿ ನಿಷೇಧಿತ ಉದ್ದೀಪನಾ ಮದ್ದು ‘ಟೆರ್ಬುಟಲೈನ್’ ಅಂಶ ಪತ್ತೆಯಾಗಿರುವುದಾಗಿ ಬಿಸಿಸಿಐ 2017 ಅಕ್ಟೋಬರ್ 10ರಂದು ಕಳುಹಿಸಿರುವ ಪತ್ರದಲ್ಲಿ ತಿಳಿಸಿತ್ತು. ನಿಷೇಧಿತ ಉದ್ದೀಪನಾ ಮದ್ದು ಸೇವಿಸಿಲ್ಲ. ಗಂಟಲು ಸೋಂಕಿಗೆ ಔಷಧ ತೆಗೆದುಕೊಂಡಿದ್ದೆ. ಅದರಲ್ಲಿ ನಿಷೇಧಿತ ಅಂಶ ಇರುವುದು ತನಗೆ ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

"ಭಾರತ ಮತ್ತು ತವರು ತಂಡ ಬರೋಡಾದ ಪರ ಆಡುವುದು ನನಗೆ ಅಪಾರ ಹೆಮ್ಮೆಯ ವಿಚಾರವಾಗಿದೆ. ನಾನು ದೇಶ ಅಥವಾ ಬರೋಡಾಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುವುದಿಲ್ಲ. ನಾನು ಮುಂದೆ ಯಾವುದೇ ಔಷಧವನ್ನು ತೆಗೆದುಕೊಳ್ಳುವಾಗ ಎಚ್ಚರ ವಹಿಸುತ್ತೇನೆ. ಬಿಸಿಸಿಐ ನಿಷೇಧಿಸಿರುವ ಅಂಶಗಳು ಇರುವ ಯಾವುದೇ ಔಷಧವನ್ನು ತೆಗೆದುಕೊಳ್ಳುವುದಿಲ್ಲವೆಂದು ಬರೋಡಾ ಕ್ರಿಕೆಟ್ ಸಂಸ್ಥೆ ಮತ್ತು ನನ್ನ ಅಭಿಮಾನಿಗಳಿಗೆ ಭರವಸೆ ನೀಡುತ್ತೇನೆ’’ ಎಂದು ಪಠಾಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News