ಭಾರತದ ಹಜ್ ಯಾತ್ರಿಕರ ಸಂಖ್ಯೆಯನ್ನು ಹೆಚ್ಚಿಸಿದ ಸೌದಿ ಅರೇಬಿಯ

Update: 2018-01-09 14:07 GMT

ಹೊಸದಿಲ್ಲಿ, ಜ.9: ಸೌದಿ ಅರೇಬಿಯವು ಭಾರತದಿಂದ ಹಜ್‌ಗೆ ತೆರಳುವ ಯಾತ್ರಿಗಳ ಸಂಖ್ಯೆಯಲ್ಲಿ 5,000 ದಷ್ಟು ಹೆಚ್ಚಳ ಮಾಡಿದ್ದು ಎರಡು ವರ್ಷಗಳಲ್ಲಿ ಎರಡನೇ ಬಾರಿ ಏರಿಕೆಯನ್ನು ಮಾಡಿದೆ. ಆಮೂಲಕ ಭಾರತದಿಂದ ಹಜ್‌ಗೆ ಒಂದು ವರ್ಷದಲ್ಲಿ ತೆರಳಬಹುದಾದವರ ಸಂಖ್ಯೆ 1,75,025ಕ್ಕೆ ತಲುಪಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಸೌದಿಯು ಭಾರತದ ಹಜ್ ಯಾತ್ರಿಕರ ಸಂಖ್ಯೆಯಲ್ಲಿ ಸುಮಾರು 40,000 ಹೆಚ್ಚಳ ಮಾಡಿದ್ದು, ಇದು ಸ್ವಾತಂತ್ರ್ಯಾನಂತರ ಮಾಡಲ್ಪಟ್ಟ ಅತ್ಯಂತ ಹೆಚ್ಚಿನ ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಏರಿಕೆಯು ಈ ವರ್ಷದಲ್ಲಿ ನಡೆಯುವ ಹಜ್‌ಗೆ ಅನ್ವಯವಾಗಲಿದೆ ಎಂದು ನಖ್ವಿ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಸೌದಿ ಅರೇಬಿಯ ಮತ್ತು ಇತರ ಅರಬ್ ದೇಶಗಳ ನಾಯಕರೊಂದಿಗೆ ಭಾರತವು ಸಂಬಂಧವನ್ನು ಉತ್ತಮಗೊಳಿಸಿರುವುದು ಈ ಏರಿಕೆಗೆ ಕಾರಣ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ.

ಇದೇ ವೇಳೆ ಅವರು ಈ ಹೆಚ್ಚಳವನ್ನು ಮಾಡಿರುವುದಕ್ಕೆ ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲಝೀಝ್ ಅಲ್ ಸೌದ್ ಮತ್ತು ಸೌದಿ ಅರೇಬಿಯ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News