ಜಲೀಲ್ ಕರೋಪಾಡಿ ಹತ್ಯೆ ತನಿಖೆಯ ದಿಕ್ಕು ತಪ್ಪಿಸಿರುವ ಸಚಿವ ರಮಾನಾಥ ರೈ: ಜೆಡಿಎಸ್ ಮುಖಂಡ ಸದಾಶಿವ ಆರೋಪ
ಮಂಗಳೂರು, ಜ.9: ತನ್ನದೇ ಪಕ್ಷದ ಜನಪ್ರಿಯ ನಾಯಕ, ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಗೆ ಜೆಡಿಎಸ್ ವಿರುದ್ಧ ಆರೋಪ ಮಾಡುವ ನೈತಿಕ ಹಕ್ಕಿಲ್ಲ ಎಂದು ಜೆಡಿಎಸ್ ಮುಖಂಡ ಎಂ.ಬಿ. ಸದಾಶಿವ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಬೇಕಾಬಿಟ್ಟಿ ಸುದ್ದಿ ಹರಡುತ್ತಿದೆ. ಅದನ್ನು ನಿಗ್ರಹಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ. ಚಿಕ್ಕಮಗಳೂರಿನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಕ್ಷಿಪ್ರಗತಿಯ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ದ.ಕ. ಜಿಲ್ಲೆಯ ಪೊಲೀಸ್ ಅಧಿಕಾರಿಗಳ ನಿಧಾನಗತಿಯ ಕಾರ್ಯ ಚಟುವಟಿಕೆ ಅಚ್ಚರಿ ಮೂಡಿಸಿದೆ ಎಂದು ಹೇಳಿದರು.
ಜಿಲ್ಲೆಯಲ್ಲೇ ಸೇವೆ ಸಲ್ಲಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ಗೃಹ ಇಲಾಖೆಯು ಸಲಹೆಗಾರರನ್ನಾಗಿ ನಿಯುಕ್ತಿಗೊಳಿಸಿದ್ದರೂ ಕೂಡ ಜಿಲ್ಲೆಗೆ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಚಿವರಾದ ರಮಾನಾಥ ರೈ ಮತ್ತು ಯು.ಟಿ. ಖಾದರ್ ಅವರ ನಡೆ ಸಂಶಯ ಹುಟ್ಟಿಸಿವೆ ಎಂದು ಎಂ.ಬಿ. ಸದಾಶಿವ ಹೇಳಿದರು.
ದ.ಕ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ನಡೆಯುವ ಘಟನೆಗಳು ಉತ್ತರ ಪ್ರದೇಶ, ಬಿಹಾರವನ್ನೂ ಮೀರಿಸುತ್ತಿವೆ. ಇದಕ್ಕೆ ಕಾಂಗ್ರೆಸ್ ಸರಕಾರವೇ ಕಾರಣ. ಕಳೆದ ನಾಲ್ಕುವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಮತೀಯ ಶಕ್ತಿಗಳನ್ನು ನಿಗ್ರಹಿಸುವಲ್ಲಿ ಸರಕಾರ ವಿಫಲವಾಗಿದೆ. ಅದನ್ನು ಮರೆಮಾಚಲು ಮತ್ತು ಮರಳಿ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಮತೀಯ ರಾಜಕಾರಣ ಮಾಡುತ್ತಿದೆ. ಬಿಜೆಪಿಗೂ ಅದೇ ಬೇಕಾಗಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಅವರು ಆರೋಪಿಸಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎರಡು ಕೊಲೆ ಕೃತ್ಯವು ಯಾತಕ್ಕೆ ನಡೆಯಿತು? ಅದರ ಹಿಂದಿರುವ ಶಕ್ತಿಗಳು ಯಾವುದು ಎಂಬುದನ್ನು ಬಹಿರಂಗಪಡಿಸುವ ಹೊಣೆ ಸರಕಾರದ್ದಾಗಿದೆ. ಆದರೆ, ಸರಕಾರ ವಾಸ್ತವಾಂಶ ಮರೆಮಾಚಲು ಯತ್ನಿಸುತ್ತಿದೆ. ಹೀಗಿರುವಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಡಿನ ಜನತೆಗೆ ಸತ್ಯ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಅದನ್ನು ಒಪ್ಪಿ ಸರಕಾರ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವ ಬದಲು ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎನ್ನುವುದು ಹಾಸ್ಯಾಸ್ಪ ಎಂದರು.
ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಮತ್ತು ಶಾಸಕ ಬಿ.ಎ. ಮೊಯ್ದಿನ್ ಬಾವ ಸಹೋದರರು ಎಂಬ ಕಾರಣಕ್ಕೆ ಫಾರೂಕ್ ವಿರುದ್ಧ ಬಿಜೆಪಿಯ ಡಾ. ವೈ. ಭರತ್ ಶೆಟ್ಟಿ ಹೇಳಿಕೆ ನೀಡಿರುವುದು ಖಂಡನೀಯ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಹೇಳಿಕೆಯಿಂದ ಕೆಂಡಮಂಡಲಗೊಂಡಿರುವುದು ಅನುಮಾನ ಮೂಡಿಸುತ್ತಿದೆ ಎಂದು ವಿಟ್ಲ ಮುಹಮ್ಮದ್ ಕುಂಞಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಚಂದ್ರಶೇಖರ್, ಅಕ್ಷಿತ್ ಸುವರ್ಣ, ನರಸಿಂಹ ಮೂರ್ತಿ, ವಸಂತ ಪೂಜಾರಿ, ರಾಮ್ ಗಣೇಶ್, ಮುನೀರ್ ಮುಕ್ಕಚೇರಿ, ಗೋಪಾಲಕೃಷ್ಣ ಅತ್ತಾವರ, ಶ್ರೀನಾಥ್ ರೈ, ಪ್ರವೀಣ್ ಚಂದ್ರ ಉಪಸ್ಥಿತರಿದ್ದರು.
ಯೂಟರ್ನ್ ಹೊಡೆದಿಲ್ಲ
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ದೀಪಕ್ ರಾವ್ ಕೊಲೆಗೆ ಸಂಬಂಧಿಸಿ ಮೈಸೂರಿನಲ್ಲಿ ನೀಡಿದ ಹೇಳಿಕೆಗೆ ಬದ್ಧರಾಗಿದ್ದಾರೆ. ಅವರೆಂದೂ ಹೇಳಿಕೆಯಿಂದ ಹಿಂದೆ ಸರಿಯಲಿಲ್ಲ. ಯೂ ಟರ್ನ್ ಕೂಡ ಮಾಡಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ವಿಟ್ಲ ಮುಹಮ್ಮದ್ ಕುಂಞಿ ತಿಳಿಸಿದರು.