×
Ad

ದೇವರ ಪೂಜೆ, ಸಮಾಜ ಸೇವೆಯಿಂದ ಧರ್ಮ ಪೂರ್ಣ: ಪೇಜಾವರ ಶ್ರೀ

Update: 2018-01-09 20:15 IST

ಉಡುಪಿ, ಜ.9: ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ತನ್ನ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ನಿರ್ಮಿಸಿರುವ ಕೌಶಲ್ಯ ಅಭಿವೃದ್ಧಿ ಕೇಂದ್ರದ ಪೂರ್ವಭಾಗದ ಕಟ್ಟಡದ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಂಗಳವಾರ ನೆರವೇರಿಸಿದರು.

ಬಳಿಕ ಶ್ರೀಕೃಷ್ಣ ಮಠದ ಮಧ್ವ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀ ರ್ವಚನ ನೀಡಿ, ಸಮಾಜ ಸೇವೆ ಮತ್ತು ಭಗವಂತನಿಗೆ ಸಲ್ಲಿಸುವ ಪೂಜೆಯಿಂದ ಮಾತ್ರ ಧರ್ಮ ಪೂರ್ಣ ಆಗಲು ಸಾಧ್ಯ. ಇದರಲ್ಲಿ ಒಂದು ಇಲ್ಲದಿದ್ದರೂ ಧರ್ಮ ಅಪೂರ್ಣವಾಗಿರುತ್ತದೆ ಎಂದರು.

ಧ್ಯಾನ ಪೂಜೆಯ ಜೊತೆಗೆ ಕಷ್ಟದಲ್ಲಿರುವವರ ಸೇವೆ ಮಾಡುವುದು ಭಗವಂತನ ನಿಜವಾದ ಆರಾಧನೆಯಾಗಿದೆ. ದೇವರ ಆರಾಧನೆಯೊಂದಿಗೆ ಜನರ ಸೇವೆ ಮಾಡುವುದರಿಂದ ಮಾತ್ರ ಮೋಕ್ಷ ದೊರೆಯಲು ಸಾಧ್ಯ. ಸಮಾಜ ಸೇವೆ ಎಂಬುದು ದೇವರಿಗೆ ಪಾವತಿಸುವ ತೆರಿಗೆಯಾಗಿದೆ. ಇದನ್ನು ಸನ್ಯಾಸಿ, ಸಂಸಾರಿ ಸಹಿತ ಎಲ್ಲರೂ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಾಜೀವ ಚಂದ್ರಶೇಖರ್‌ಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು. ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೂತನ ಕಟ್ಟಡದಲ್ಲಿ ದೀಪ ಬೆಳಗಿಸಿದರು.

ಮಕ್ಕಳ ಕಲ್ಯಾಣ ಸಮಿತಿಯ ನಿಕಟಪೂರ್ವ ಅಧ್ಯಕ್ಷ ನಾರಾಯಣ ಪ್ರಶಸ್ತಿ ಪತ್ರ ವಾಚಿಸಿದರು. ಶ್ರೀಕೃಷ್ಣ ಬಾಲನಿಕೇತನ ಉಪಾಧ್ಯಕ್ಷ ಪ್ರೊ.ಕಮಲಾಕ್ಷ ಸ್ವಾಗತಿಸಿದರು. ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News