ಹಾರಾಡಿ: ಕಾರ್ಮಿಕ ಕಾಲನಿಯಲ್ಲಿ ಜನಸ್ಪಂದನ
ಉಡುಪಿ, ಜ.9: ಉಡುಪಿ ಜಿಲ್ಲಾಡಳಿತ, ಹಾರಾಡಿ ಗ್ರಾಮ ಪಂಚಾಯತ್‌ನ ಸಹಯೋಗದಲ್ಲಿ ಇಂದು ಹಾರಾಡಿ ಗ್ರಾಪಂ ವ್ಯಾಪ್ತಿಯ ಗಾಂಧಿನಗರ ವಲಸೆ ಕಾರ್ಮಿಕ ಕಾಲೊನಿಯಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಉಡುಪಿ ಜಿಪಂನ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ವಲಸೆ ಕಾರ್ಮಿಕರ ಬಗ್ಗೆ ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸಿ ಅವರಿಗೆ ಮೂಲ ಭೂತ ಸೌಕರ್ಯಗಳನ್ನು ನೀಡುವ ಕುರಿತು ವಿಶೇಷ ಅಸ್ಥೆ ವಹಿಸಿ ವಲಸೆ ಕಾರ್ಮಿಕರಿದ್ದ ಕಾಲೊನಿಗೆ ಬಂದು ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿರುವು ದನ್ನು ಪ್ರಶಂಸಿಸಿದರು. ಇದರಿಂದ ಸರಕಾರವೇ ಜನರ ಮನೆಬಾಗಿಲಿಗೆ ಬಂದಂತಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಪಂ ಮುಖ್ಯ ಕಾರ್ಯ ನಿರ್ವಾಹ ಣಾಧಿಕಾರಿ ಶಿವಾನಂದ ಕಾಪಶಿ, ಖುದ್ದಾಗಿ ಕಾಲೊನಿ ಸುತ್ತ ಭೇಟಿ ನೀಡಿ ವಲಸೆ ಕಾರ್ಮಿಕರ ಮೂಲಭೂತ ಸೌಕರ್ಯಗಳನ್ನು ಪರಾಮರ್ಶಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಿ ಶೌಚಾಲಯ, ಬೀದಿ ದೀಪ, ಪಡಿತರ ಚೀಟಿ, ಮತದಾರರ ಚೀಟಿ ಮತ್ತು ಆಧಾರ್‌ಕಾರ್ಡ್ ಇಲ್ಲದಿರುವವರಿಗೆ ಇಲಾಖೆ ವತಿಯಿಂದ ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ನೀಡುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಶ್ರೀನಿವಾಸ್‌ರಾವ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಮಿಕ ಅಧಿಕಾರಿ ಎವ್.ಪಿ.ವಿಶ್ವನಾಥ್ ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗುವ ಪರಿಷ್ಕೃತ ಸೌಲ್ಯಗಳ ಬಗ್ಗೆ ವಿವರಿಸಿದರು.
ಉಡುಪಿ ತಾಪಂ ಸದಸ್ಯೆ ವಸಂತಿ ಎಸ್,ತಾಪಂ ಕಾರ್ಯನಿರ್ವಾಹಣಾಧಿಕಾರಿ ಮೋಹನ್‌ರಾಜ್, ಹಾರಾಡಿ ಗ್ರಾಪಂ ಉಪಾಧ್ಯಕ್ಷ ಕುಮಾರ ಸುವರ್ಣ, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ್ ಭಟ್, ನಮ್ಮ ಭೂಮಿ ಪದಾಧಿಕಾರಿಗಳಾದ ಚೆನ್ನವೀರಪ್ಪ, ಪ್ರಭಾಕರ್ ಶೆಟ್ಟಿ ಗ್ರಾಮ ಲೆಕ್ಕಾಧಿಕಾರಿ ಸುಧೀರ್ ಶೆಟ್ಟಿ, ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್ ಈ ಸಂದರ್ಭ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕಾಡೂರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಜಿಲ್ಲಾ ಬಾಲಕಾರ್ಮಿಕ ಸಂದ ಯೋಜನಾ ನಿರ್ದೇಶಕ ಪ್ರಭಾಕರ್ ಆಚಾರ್ ವಂದಿಸಿದರು.