ಜನನ ಪೂರ್ವ ಲಿಂಗ ಪತ್ತೆ ಮಾಡುವ ಕೇಂದ್ರಗಳ ವಿರುದ್ಧ ಕಠಿಣ ಕ್ರಮ: ಆರೋಗ್ಯಾಧಿಕಾರಿ ಎಚ್ಚರಿಕೆ
ಮಂಗಳೂರು, ಜ.9: ಪ್ರಸವ ಪೂರ್ವದಲ್ಲಿ ಗರ್ಭದ ಭ್ರೂಣ ಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್ ಸೆಂಟರ್‌ಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣರಾವ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅನೇಕ ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯಚರಿಸುತ್ತಿದೆ. ಅವುಗಳ ಕಾರ್ಯವೈಖರಿಯ ತಪಾಸಣೆಯನ್ನು ಪ್ರತಿವಾರ ನಡೆಸಲಾಗುತ್ತಿದೆ. ಆದರೆ ಕೆಲವು ಸೆಂಟರ್‌ಗಳು ಅಕ್ರಮವಾಗಿ ಜನನ ಪೂರ್ವ ಪತ್ತೆ ಮಾಡುವ ಮಾಹಿತಿ ಲಭ್ಯವಿರುವುದರಿಂದ ಕಾನೂನಾತ್ಮಕ ಕ್ರಮ ಕೈಗೊಂಡು ಅದರ ನೋಂದಣಿ ಯನ್ನು ರದ್ದು ಮಾಡಲಾಗುವುದು ಎಂದು ಡಾ. ರಾಮಕೃಷ್ಣರಾವ್ ಎಚ್ಚರಿಸಿದರು.
ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಉಪಕರಣ ಉಪಯೋಗಿಸುತ್ತಿರುವ ಕಾರ್ಡಿಯಾಲಜಿಸ್ಟ್‌ಗಳು ಕಾರ್ಡಿಕಾಕ್‌ಗೆ ಸಂಬಂಧಪಟ್ಟ ಸ್ಕ್ಯಾನ್‌ಗಳನ್ನು ಹಾಗೂ ಯುರೋಲಾಜಿಸ್ಟ್ ಗಳು ಯುರೋಲಾಜಿಗೆ ಸಂಬಂಧಪಟ್ಟ ಸ್ಕ್ಯಾನಿಂಗ್‌ಗಳನ್ನು ಮಾತ್ರ ಮಾಡುತ್ತೇವೆ ಎಂಬುದಾಗಿ ಸ್ಟಾಂಪ್ ಪೇಪರ್‌ನಲ್ಲಿ ನೋಟರಿ ಅಫಿದಾತ್ ಮಾಡಿ ಆರೋಗ್ಯ ಇಲಾಖೆಯ ಜನನ ಪೂರ್ವ ಲಿಂಗ ಪತ್ತೆ ವಿಭಾಗಕ್ಕೆ ಸಲ್ಲಿಸಬೇಕು ಎಂದು ಡಾ.ರಾಮಕೃಷ್ಣ ರಾವ್ ಸೂಚಿಸಿದರು.
ಸಲಹಾ ಸಮಿತಿಯ ಅಧ್ಯಕ್ಷೆ ಡಾ. ರಶ್ಮಿ ಮಾತನಾಡಿ ಜನನ ಪೂರ್ವ ಲಿಂಗ ನಿರ್ಣಯದ ಕುರಿತು ಅರಿವು ಮೂಡಿಸಲು ಈ ತಿಂಗಳು ಬಾನುಲಿ ಮೂಲಕ ಮಾಹಿತಿಯನ್ನು ನೀಡಲಾಗುವುದು ಎಂದರು.
ಸಭೆಯಲ್ಲಿ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಸವಿತಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಸಿಕಂದರ್ ಪಾಷ, ಡಾ ರತಿಕಾ ಶೆಣೈ, ನ್ಯಾಯವಾದಿ ಚಂದ್ರಹಾಸ ಕೆ. ಮತ್ತಿತರರು ಉಪಸ್ಥಿತರಿದ್ದರು.