ಪಲಿಮಾರು ಪರ್ಯಾಯ: ಕರ್ನಾಟಕ ಬ್ಯಾಂಕ್‌ನಿಂದ ಹಸಿರುಕಾಣಿಕೆ
ಉಡುಪಿ, ಜ.9: ಶ್ರೀ ಪಲಿಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ವಲಯ ಕಚೇರಿಯಿಂದ ಸಂಘಟಿಸಿದ್ದ ಹಸಿರುವಾಣಿ ಹೊರೆಕಾಣಿಕೆ ಕಾರ್ಯಕ್ರಮದ ಜೊತೆಗೆ ಬ್ಯಾಂಕಿನ ವಾಕಥಾನ್ ರೋಡ್ ಶೋ ಕೂಡ ಇಂದು ನಡೆದು ವಲಯದ ಸಿಬ್ಬಂದಿಗಳು, ನಿವೃತ್ತ ಸಿಬ್ಬಂದಿಗಳು, ಬ್ಯಾಂಕಿನ ಉನ್ನತಾಧಿಕಾರಿಗಳು ಮೆರವಣಿಗೆಯಲ್ಲಿ ಬಂದು ಮಠಕ್ಕೆ ಹೊರೆಕಾಣಿಕೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್, ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಬಲೇಶ್ವರ ಎಂ.ಎಸ್, ಉಡುಪಿ ಪ್ರಾದೇಶಿಕ ವಲಯದ ಸಹಾಯಕ ಮಹಾ ಪ್ರಬಂಧಕ ವಿದ್ಯಾಲಕ್ಷ್ಮಿ ಆರ್, ಮುಖ್ಯ ಪ್ರಬಂಧಕ ವಾದಿರಾಜ್ ಕೆ., ದಿನೇಶ ಕುಮಾರ್ ಕೆ, ನಿವೃತ್ತ ಉಪ ಮಹಾ ಪ್ರಬಂಧಕ ಕೆ.ವಿ.ತುಂಗಾ, ಆನಂದರಾಮ ಅಡಿಗ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸೋಮವಾರ ಕರ್ನಾಟಕ ವಿಶ್ವ ಬ್ರಾಹ್ಮಣ ಸಮಾಜ, ಜೋಗಿ ಸಮಾಜ, ಉಡುಪಿಯ ರಾಜಸ್ತಾನ ಸಮಾಜ, ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘಗಳು ಹೊರಕಾಣಿಕೆಯನ್ನು ಮೆರವಣಿಗೆಯಲ್ಲಿ ತಂದು ಸಮರ್ಪಿಸಿದವು. ಈ ಸಂದರ್ಭದಲ್ಲಿ ಪಲಿಮಾರು ಶ್ರೀಗಳು ಅನುಗ್ರಹ ಮಂತ್ರಾಕ್ಷತೆ ವಿತರಿಸಿದರು.