×
Ad

ಲಂಚ ಪ್ರಕರಣ: ಸಿಬಿಐಯಿಂದ ಕೇಂದ್ರ ಅಬಕಾರಿ ಅಧಿಕಾರಿಯ ಬಂಧನ

Update: 2018-01-09 21:28 IST

ಹೊಸದಿಲ್ಲಿ, ಜ.9: ಸೇವಾ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಲಂಚ ಕೇಳಿದ ಆರೋಪದಲ್ಲಿ ವಿತ್ತ ಸಚಿವಾಲಯದಲ್ಲಿ ನಿಯೋಜನೆಗೊಂಡಿದ್ದ ಅಬಕಾರಿ ಮತ್ತು ಕಸ್ಟಮ್ಸ್ ಕೇಂದ್ರ ಮಂಡಳಿ (ಸಿಬಿಇಸಿ) ಅಧಿಕಾರಿ ಮತ್ತು ಮುಂಬೈಯ ಜಿಎಸ್‌ಟಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಯನ್ನು ಸಿಬಿಐ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿತ್ತ ಸಚಿವಾಲಯದ ಸಿಬಿಇಸಿ ಕಚೇರಿಯ ಆಡಳಿತ ವಿಭಾಗದಲ್ಲಿ ಸಹಾಯಕ ವಿಭಾಗೀಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಆಶೀಶ್ ಠಾಕೂರ್ ಮತ್ತು ಜಿಎಸ್‌ಟಿಯ ಮುಂಬೈ ಕಚೇರಿಯಲ್ಲಿ ನಿಯೋಜಿಸಲಾಗಿರುವ ಸಿಬಿಇಸಿ ವರಿಷ್ಠಾಧಿಕಾರಿ ಎಸ್.ಕೆ. ಸ್ವಾಮಿನಾಥನ್ ಬಂಧಿತ ಆರೋಪಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ರವೀಂದ್ರ ಕುಮಾರ್ ಮಂಡಲ್ ಎಂಬವರನ್ನೂ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ವಿರುದ್ಧ ನಡೆಯುತ್ತಿರುವ ಕೆಲವು ಶಿಸ್ತುಕ್ರಮ ಪ್ರಕ್ರಿಯೆಯಿಂದಾಗಿ ಸಹಾಯಕ ಆಯುಕ್ತ ಹುದ್ದೆಗೆ ಭಡ್ತಿ ಪಡೆಯುವ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳು ಬಾಕಿಯಾಗಿದ್ದು, ಅವುಗಳನ್ನು ತನ್ನ ಪರವಾಗಿ ಸಿದ್ಧಪಡಿಸುವಂತೆ ಸ್ವಾಮಿನಾಥನ್ ಸಿಬಿಇಸಿ ಅಧಿಕಾರಿ ಠಾಕೂರ್ ಅವರನ್ನು ಕೇಳಿದ್ದರು ಎಂದು ಸಿಬಿಐ ತನ್ನ ದೂರಿನಲ್ಲಿ ಆರೋಪಿಸಿದೆ.

ಈ ಪ್ರಸ್ತಾಪಕ್ಕೆ ಒಪ್ಪಿದ್ದ ಠಾಕೂರ್ ಅದಕ್ಕಾಗಿ ಸರಿಯಾದ ಪ್ರತಿಫಲದ ಬೇಡಿಕೆಯಿಟ್ಟಿದ್ದರು. ನಿಗದಿಪಡಿಸಿದ ಲಂಚವನ್ನು ತಲುಪಿಸುವ ಸಲುವಾಗಿ ರವೀಂದ್ರ ಮಂಡಲ್‌ನ ಮೊಬೈಲ್ ಸಂಖ್ಯೆಯನ್ನು ನೀಡಿದ್ದರು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಸ್ವಾಮಿನಾಥನ್ ರವೀಂದ್ರ ಮಂಡಲ್‌ನನ್ನು ಭೇಟಿಯಾಗಿ ಫೋನ್ ಮೂಲಕ ಠಾಕೂರ್ ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ಠಾಕೂರ್ ದಾಖಲೆಗಳನ್ನು ಸ್ವಾಮಿನಾಥನ್ ಪರ ಸಿದ್ಧಪಡಿಸಲು ನಿಗದಿತ ಮೊತ್ತದ ಬೇಡಿಕೆಯಿಟ್ಟಿದ್ದರು. ಸ್ವಾಮಿನಾಥನ್ ಆ ಮೊತ್ತದ ಅರ್ಧ ಭಾಗವನ್ನು ಕೆಲಸಕ್ಕೆ ಮೊದಲು ಮತ್ತು ಉಳಿದ ಮೊತ್ತವನ್ನು ಕೆಲಸ ಆದ ನಂತರ ನೀಡುವುದಾಗಿ ತಿಳಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದಂದು ರವೀಂದ್ರ ಮಂಡಲ್, ಠಾಕೂರ್ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಸಿಬಿಐ ಅಧಿಕಾರಿಗಳು ಮೂವರನ್ನೂ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News